ವಿಜಯವಾಣಿ ಸುದ್ದಿಜಾಲ ಉಡುಪಿ
ಕಾಪು ಗರುಡಾ ಗ್ಯಾಂಗ್ನ ಸಕ್ರಿಯ ಸದಸ್ಯನಾಗಿದ್ದ ಕಬೀರ್ ಅಲಿಯಾಸ್ ಕಬೀರ್ ಹುಸೇನ್ (46) ಎಂಬಾತನನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಜು.10ರಂದು ಬಂಧಿಸಿದ್ದಾರೆ.
ಕಾರ್ಕಳದ ಕಂಪನ ಕೌಡೂರು ಗ್ರಾಮದ ಕಬೀರ್, 2005ನೇ ಇಸವಿಯಿಂದ ಈವರೆಗೆ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಕಳ್ಳತನ, ಜಾನುವಾರು ಕಳವು, ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಸೇರಿದಂತೆ 17 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಅವುಗಳ ಪೈಕಿ ಈಗಾಗಲೇ ಎರಡು ಪ್ರಕರಣಗಳಲ್ಲಿ ಶಿೆ ಅನುಭವಿಸಿದ್ದು, 8 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾನೆ. ಮೂರು ಪ್ರಕರಣ ರಾಜಿ ಮಾಡಿಕೊಂಡಿದ್ದು, ನ್ಯಾಯಾಲಯದಲ್ಲಿ ಎರಡು ಪ್ರಕರಣ ವಿಚಾರಣೆಯಲ್ಲಿದೆ. ಇನ್ನುಳಿದ ಎರಡು ಪ್ರಕರಣ ಪೊಲೀಸ್ ತನಿಖೆಯಲ್ಲಿದೆ.
ಉಡುಪಿ ಜಿಲ್ಲೆಯ ಕಾರ್ಕಳ ನಗರ, ಹಿರಿಯಡ್ಕ, ಪಡುಬಿದ್ರಿ, ಮಣಿಪಾಲ, ಶಿರ್ವ, ಕಾಪು ಠಾಣಾ ವ್ಯಾಪ್ತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಉಡುಪಿ ಜಿಲ್ಲೆಯಲ್ಲಷ್ಟೇ ಅಲ್ಲದೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ಕೊಪ್ಪ, ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು, ಮಂಗಳೂರು ನಗರ, ಸುರತ್ಕಲ್ ಠಾಣಾ ವ್ಯಾಪ್ತಿಯ ಪ್ರಕರಣಗಳಲ್ಲೂ ಭಾಗಿಯಾಗಿದ್ದಾನೆ.
ಉಡುಪಿ ಜಿಲ್ಲಾಧಿಕಾರಿ ಅವರ ಆದೇಶದಂತೆ ಗೂಂಡಾ ಕಾಯಿದೆಯಡಿ ಕಬೀರ್ ಅಲಿಯಾಸ್ ಕಬೀರ್ ಹುಸೇನ್ನನ್ನು ಬಂಧಿಸಲಾಗಿದ್ದು, ಮೈಸೂರು ಕೇಂದ್ರ ಕಾರಾಗೃಹಕ್ಕೆ ಸಾಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.