ಕುಂದಾಪುರ: ಬಡ ರೋಗಿಗಳ ಪಾಲಿಗೆ ಆಯುಷ್ಮಾನ್ ಯೋಜನೆ ಅದ್ಭುತ ವರದಾನವಾಗಿದೆ. ಅದನ್ನು ಬಳಸಿಕೊಳ್ಳುವುದು ಹೇಗೆ ಎಂಬ ಅರಿವು ನಮ್ಮಲ್ಲಿದ್ದಾಗ ಮಾತ್ರ ಆ ಯೋಜನೆ ಫಲವನ್ನು ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಆಯುಷ್ಮಾನ್ ಯೋಜನೆ ಬಗ್ಗೆ ತಿಳಿದು ಅದನ್ನು ಇತರರಿಗೂ ತಿಳಿಸುವಲ್ಲಿ ನಾವು ಮುಂದಾಗಬೇಕು ಎಂದು ಕೆ.ಎಂ.ಸಿಯ ಆರೋಗ್ಯ ಮಿತ್ರ ವಿಭಾಗದ ಸುಜನ್ಮಾಲಾ ಅಭಿಪ್ರಾಯಪಟ್ಟರು.
ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಎಸ್.ವಿ.ಕಾಮರ್ಸ್ ಕ್ಲಬ್ ಆಶ್ರಯದಲ್ಲಿ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣದಲ್ಲಿ ಸೋಮವಾರ ನಡೆದ ಆಯುಷ್ಮಾನ್ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ಬಿಲ್ಲವರ ಸಮಾಜ ಸೇವಾ ಸಂಘ ಅಧ್ಯಕ್ಷ ಗೋಪಾಲ ಬಿಲ್ಲವ ಶುಭ ಹಾರೈಸಿದರು.
ಉಪನ್ಯಾಸಕಿ ಸುಗುಣಾ ಆರ್.ಕೆ. ಅಭಿಪ್ರಾಯ ಹಂಚಿಕೊಂಡರು. ವಿದ್ಯಾರ್ಥಿ ಪ್ರತಿನಿಧಿಗಳಾದ ಸನ್ನಿಧಿ ಮತ್ತು ಶ್ರೀಲಕ್ಷ್ಮೀ ಉಪಸ್ಥಿತರಿದ್ದರು.
ಫ್ಲೇವನ್ ಲೋಬೊ ಸ್ವಾಗತಿಸಿದರು. ದೀಪಾಲಿ ಪ್ರಾರ್ಥಿಸಿದರು. ಅಕ್ಷಯಾ ಆರ್. ಖಾರ್ವಿ ಪ್ರಾಸ್ತಾವಿಕ ಮಾತುಗಳಾಡಿದರು. ನರೇಂದ್ರ ಎಸ್.ಗಂಗೊಳ್ಳಿ ಅತಿಥಿಗಳನ್ನು ಪರಿಚಯಿಸಿದರು. ಶ್ರೀನಿವಾಸ ಪೈ ನಿರೂಪಿಸಿದರು. ತನ್ವಿ ವಂದಿಸಿದರು.