ವಿಜಯವಾಣಿ ಸುದ್ದಿಜಾಲ ಕಾರ್ಕಳ
ಹಿರ್ಗಾನ ಗ್ರಾಮದ ಹೆಮುಂರ್ಡೆಯಲ್ಲಿ ಮಂಗಳವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರಿಬ್ಬರು ಸುವರ್ಣ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಹಿರ್ಗಾನದ ಭರತ್ ಪೂಜಾರಿ(29) ಹಾಗೂ ಹರ್ಷನ್ ಆಚಾರ್ಯ(23) ಎಂದು ಗುರುತಿಸಲಾಗಿದೆ.
ಆಳವಾದ ನೀರಿಗೆ ಇಳಿದ ವೇಳೆ ಅವಘಡ:
ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಐವರು ಸ್ನೇಹಿತರು ಮಂಗಿಲಾರು ಮೂಲಕ ಸುಮಾರು ಎರಡು ಕಿ.ಮೀ. ದುರ್ಗಮ ದಾರಿ ಕ್ರಮಿಸಿ ನದಿಗೆ ತೆರಳಿದ್ದರು. ಈ ವೇಳೆ ಆಳವಾದ ನೀರಿಗೆ ತೆರಳಿದ ಭರತ್ ಹಾಗೂ ಹರ್ಷನ್ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ಕಾರ್ಯಾಚರಣೆಗೆ ತೊಡಕಾದ ದುರ್ಗಮ ದಾರಿ:
ವಾಹನ ಸಂಚಾರಕ್ಕೆ ದಾರಿ ಇಲ್ಲದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಕಿ.ಮೀ. ನಡೆದು ಘಟನಾ ಸ್ಥಳಕ್ಕೆ ತೆರಳಿ, ಸ್ಥಳಿಯರ ಸಹಕಾರದೊಂದಿಗೆ ಮೂರು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಮೇಲಕ್ಕೆತ್ತಿದರು. ಠಾಣಾಧಿಕಾರಿ ಸಂಜೀವ ದೇವಾಡಿಗ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಸ್ವಂತ ಮನೆ ಕನಸು ಕಂಡಿದ್ದ ಭರತ್
ಭರತ್ ಪೇಂಟಿಂಗ್ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದು, ಸ್ವಂತ ಮನೆ ನಿಮಾರ್ಣದ ಕನಸು ಕಂಡಿದ್ದರು. ಮನೆಯ ಕಾಮಗಾರಿ ಸ್ಲಾಬ್ ಹಂತ ತಲುಪಿದ್ದು, ಶೀಘ್ರವೇ ಗೃಹ ಪ್ರವೇಶ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ವಿಧಿಯ ಕ್ರೂರ ಆಟಕ್ಕೆ ಯುವಕ ಬಲಿಯಾಗಿರುವುದು ಕುಟುಂಬಸ್ಥರಲ್ಲಿ ತೀವ್ರ ದು@ಖಕ್ಕೆ ಕಾರಣವಾಗಿದೆ.