ಉಡುಪಿಯ ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ.
* ಉಡುಪಿಯ ಮನೋವೈದ್ಯ ಡಾ .ಪಿ.ವಿ. ಭಂಡಾರಿ ಮಾಹಿತಿ
* ಚಾಲ್ತಿಯಲ್ಲಿರುವ ಗಾಂಜಾ, ಅಫೀಮು ನಿಲ್ಲಿಸೋಣ
ಉಡುಪಿ: ಇತ್ತೀಚೆಗೆ ಯುವಕನೊಬ್ಬ 'ಝಾಂಬಿ ಡ್ರಗ್ಸ್' ಸೇವಿಸಿದಂತೆ ವರ್ತಿಸಿರುವ ವಿಡಿಯೋ ವೈರಲ್ ಆಗಿತ್ತು. ಅದು ಸಾಕಷ್ಟು ಆತಂಕಕ್ಕೂ ಕಾರಣವಾಗಿತ್ತು. ಬಳಿಕ ಗೃಹ ಸಚಿವರು ಸ್ಪಷ್ಟನೆ ನೀಡಿ, ಡ್ರಗ್ಸ್ ಬಗ್ಗೆ ವದಂತಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದರು. ಓರ್ವ ಯುವಕನನ್ನೂ ಈ ವಿಚಾರವಾಗಿ ಬಂಧಿಸಲಾಗಿತ್ತು. ಆದರೆ, ಝಾಂಬಿ ಡ್ರಗ್ಸ್ ಬಳಕೆ ಭಾರತದಲ್ಲಿ ಇಲ್ಲ ಎಂದು ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ತಿಳಿಸಿದ್ದಾರೆ.
ಅಮೆರಿಕದಲ್ಲಿ 2016ರಲ್ಲಿ ವರದಿಯಾದಂತೆ ಅದು ವೆಟರ್ನರಿ ಡ್ರಗ್ ಆಗಿದೆ. ಪ್ರಾಣಿಗಳಿಗೆ ಅರಿವಳಿಕೆ ನೀಡಲು ಅದನ್ನು ಬಳಸಲಾಗುತ್ತದೆ. ಮನುಷ್ಯರು ಈ ಡ್ರಗ್ ಬಳಸಿದರೆ ಚರ್ಮದಲ್ಲಿ ಗಾಯ ಆಗುತ್ತದೆ. ಪ್ರತಿಮೆಯಂತೆ ನಿಂತುಕೊಳ್ಳುವ ವರ್ತನೆ ಕಂಡುಬರುತ್ತದೆ. ಭಾರತದಲ್ಲಿ ಇದರ ಬಳಕೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.
ತಪ್ಪು ನಿರ್ಧಾರ ಬೇಡ
ಬೆಂಗಳೂರು ಮತ್ತು ಚಂಡೀಗಢದಲ್ಲಿ ವೈರಲ್ ಆದ 'ಝಾಂಬಿ ಡ್ರಗ್ಸ್'ನ 30 ಸೆಕೆಂಡ್ ವಿಡಿಯೋ ಆಧರಿಸಿ ತಪ್ಪು ನಿರ್ಧಾರ ಕೈಗೊಳ್ಳಬಾರದು. ಬಿಸಿಲು ಅಥವಾ ಹೈಪೋಗ್ಲೈಸಿಮಿಯಾ ಸೇರಿದಂತೆ ಅನೇಕ ಕಾರಣಗಳಿಂದ ಈ ರೀತಿಯ ವರ್ತನೆ ಮನುಷ್ಯನಲ್ಲಿ ಕಾಣಿಸಬಹುದು. ಇಂತಹ ಸಂದರ್ಭಗಳಲ್ಲಿ ವಿಡಿಯೋ ಮಾಡುವ ಬದಲು ಅಂಥವರಿಗೆ ಸಹಾಯ ಮಾಡಿ ಎಂದು ಸಲಹೆ ನೀಡಿದ್ದಾರೆ.
ಅನಗತ್ಯ ಭಯ ಹರಡಿಸಬೇಡಿ
ನಮ್ಮಲ್ಲಿ ಝಾಂಬಿ ಬಳಕೆ ಇಲ್ಲ. ಈ ಬಗ್ಗೆ ಅನಗತ್ಯ ಭಯ ಹರಡಿಸಬೇಡಿ. ಅದರ ಬದಲು ನಮ್ಮಲ್ಲಿ ಚಾಲ್ತಿಯಲ್ಲಿರುವ ಗಾಂಜಾ, ಅಫೀಮು, ನಿದ್ರೆ ಮಾತ್ರೆ , ಎಂಡಿಎಂಎ ಗಳಂತಹ ಮಾದಕ ದ್ರವ್ಯಗಳ ನಿಯಂತ್ರಣದ ಕಡೆ ಹೆಚ್ಚು ಗಮನ ನೀಡಿ. ಇವುಗಳು ನಮ್ಮ ಯುವಜನತೆಯನ್ನು ನಿಜವಾಗಿಯೂ ಹಾಳು ಮಾಡುತ್ತಿವೆ. ಇವುಗಳ ಬಳಕೆಯ ವಿರುದ್ಧ ಎಚ್ಚರ, ಜಾಗೃತಿ ಅಗತ್ಯ ಎಂದು ಡಾ. ಭಂಡಾರಿ ಮನವಿ ಮಾಡಿದ್ದಾರೆ.