ಶ್ರೀ ಕೃಷ್ಣದೇವರ ಮುಂಭಾಗ ಚಂದ್ರಶಾಲೆಯಲ್ಲಿ "ಪರಾಭವ" ಸಂವತ್ಸರದ ಪಂಚಾಂಗ ಶ್ರವಣ ಕಾರ್ಯಕ್ರಮ.
ಉಡುಪಿ: ಜಿಲ್ಲೆಯಾದ್ಯಂತ ಬುಧವಾರ ಸೌರ ಯುಗಾದಿ ಸಂಭ್ರಮದಿಂದ ನಡೆಯಿತು. ವಿವಿಧ ದೇವಸ್ಥಾನಗಳಲ್ಲಿ ಪಂಚಾಂಗ ಶ್ರವಣ ನೆರವೇರಿತು. ಮನೆಗಳಲ್ಲಿ ದೇವರ ಮುಂದೆ ವಿಷು ಕಣಿಯಿಟ್ಟು ಪೂಜಿಸಲಾಯಿತು.
ಕೃಷ್ಣ ಮಠದಲ್ಲಿ ಬೆಳಗ್ಗೆ ಸುವರ್ಣ ರಥೋತ್ಸವ ನಡೆಯಿತು.
ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಹಾಗೂ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶ ಶ್ರೀವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಬಳಿಕ ಶ್ರೀ ಕೃಷ್ಣದೇವರ ಮುಂಭಾಗ ಚಂದ್ರಶಾಲೆಯಲ್ಲಿ ಪರ್ಯಾಯ ಮಠದ ಪುರೋಹಿತ ಸುದರ್ಶನ ಆಚಾರ್ಯ "ಪರಾಭವ" ಸಂವತ್ಸರದ ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಸಿಕೊಟ್ಟರು. ಶೀರೂರು ಮಠದ ದಿವಾನ್ ಡಾ. ಉದಯಕುಮಾರ ಸರಳತ್ತಾಯ ಉಪಸ್ಥಿತರಿದ್ದರು. ಸೋದೆ ಮಠದಲ್ಲಿ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಯುಗಾದಿ ಆಚರಣೆ ಹಾಗೂ ಪಂಚಾಂಗ ಶ್ರವಣ ನೆರವೇರಿತು.