ಕಾಸರಗೋಡು: ಪೊಲೀಸರನ್ನು ಕಂಡು ಅತಿ ವೇಗದಲ್ಲಿ ಚಲಾಯಿಸಿದ ಕಾರನ್ನು ಹಿಂಬಾಲಿಸಿ ವಶಕ್ಕೆ ಪಡೆದ ಕುಂಬಳೆ ಠಾಣೆ ಪೊಲೀಸರು, ಯೂಟ್ಯೂಬರ್, ಕಾಸರಗೋಡು ಪೆರುಂಬಳ ರಾಗಂ ನಿವಾಸದ ಎಸ್.ಆರ್.ಧನ್ಯಾ(28) ಎಂಬಾಕೆ ವಿರುದ್ಧ ಕೇಸು ದಾಖಲಿಸಿದ್ದಾರೆ. ಠಾಣೆ ಇನ್‌ಸ್ಪೆಕ್ಟರ್ ಬೈಜು ಕೆ.ಜೋಸೆಫ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಯಿತು.
‘ಆಪರೇಷನ್ ತೂಫಾನ್’ ಅಂಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬಳೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಕಾಸರಗೋಡು ಅಣಂಗೂರು ಹೆದ್ದಾರಿಯಲ್ಲಿ ಅಪಾಯಕರ ರೀತಿಯಲ್ಲಿ ನಿಂತಿದ್ದ ಕಾರನ್ನು ತಪಾಸಣೆ ನಡೆಸಲು ಮುಂದಾಗುತ್ತಿದ್ದಂತೆ, ಕಾರನ್ನು ಏಕಾಏಕಿ ಅತಿ ವೇಗದಲ್ಲಿ ಕುಂಬಳೆ ಭಾಗಕ್ಕೆ ಚಲಾಯಿಸಲಾಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರನ್ನು ಹಿಂಬಾಲಿಸಿ ಬಂದ್ಯೋಡು ಭಗವತೀನಗರದಲ್ಲಿ ತಡೆದು ನಿಲ್ಲಿಸಿದ್ದಾರೆ. ಈ ಸಂದರ್ಭ ಕಾರು ಚಲಾಯಿಸುತ್ತಿದ್ದ ಧನ್ಯಾ ಮದ್ಯದ ನಶೆಯಲ್ಲಿರುವುದು ಕಂಡುಬಂದಿದೆ. ಅವರೊಂದಿಗೆ ಪತಿಯೂ ಇದ್ದರೆನ್ನಲಾಗಿದೆ. ಧನ್ಯಾಗೆ ಪೊಲೀಸರು ನೋಟಿಸ್ ನೀಡಿ ಬಿಡುಗಡೆಗೊಳಿಸಿದ್ದು, ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.