ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್​ ಸಿದ್ದಪ್ಪ ಗಂಗಣ್ಣನವರ್​ ಡಾ. ಬಿ.ಆರ್​ ಅಂಬೇಡ್ಕರ್​ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. 
ಉಡುಪಿ

ಸಂವಿಧಾನದ ಮೌಲ್ಯದ ಅರಿವಿದ್ದಾಗ ಮಾತ್ರ ಶಿಸ್ತು ಬದ್ಧ ಜೀವನ ಸಾಧ್ಯ

ಉಡುಪಿ: ಯುವ ಜನತೆ ಮತ್ತು ನಾಗರಿಕರಲ್ಲಿ ಸಂವಿಧಾನದ ಹಕ್ಕು, ಕರ್ತವ್ಯಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಸಂವಿಧಾನದ ಮೌಲ್ಯಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಇದ್ದಾಗ ಮಾತ್ರ ಶಿಸ್ತು ಬದ್ಧ ಜೀವನ ನಡೆಸಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್​ ಸಿದ್ದಪ್ಪ ಗಂಗಣ್ಣನವರ್​ ಹೇಳಿದರು.

ಮಂಗಳವಾರ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ, ಕಾನೂನು ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ, ಡಾ. ಬಿ.ಆರ್​ ಅಂಬೇಡ್ಕರ್​ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಸಂವಿಧಾನವು ದೇಶದ ಪ್ರತಿ ಪ್ರಜೆಗೂ ಸ್ವತಂತ್ರವಾಗಿ ಜೀವಿಸಲು ಅವಕಾಶ ಮಾಡಿಕೊಟ್ಟಿದೆ. ಸಂಸತ್ತು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿರುವಂತಹ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂಛಆಗಿದ್ದು, ಭಾರತದ ಭೂವಿಸ್ತಾರಗಳನ್ನು ಗಮನಿಸಿದಾಗ ದೇಶದ ಜನಸಂಖ್ಯೆ, ಸಂಸತಿ, ಸಾಮಾಜಿಕ ವೈವಿಧ್ಯತೆಗಳು, ವಿಚಾರಗಳಲ್ಲಿ ಸ್ವಾಮ್ಯತೆ ಕಾಣಬಹುದಾಗಿದೆ. ಮಕ್ಕಳು ಪ್ರಜಾಪ್ರಭುತ್ವದ ಬಗ್ಗೆ ತಿಳಿದುಕೊಳ್ಳಲು ಯುವ ಸಂಸತ್ತು ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ. ಯುವ ಸಂಸತ್ತು ಸಭೆಗಳು ಜಿಲ್ಲೆಯಲ್ಲಿ ಸುಮಾರು ಎರಡುವರೆ ತಿಂಗಳುಗಳ ಕಾಲ ನಡೆಯಲಿದ್ದು, ಶಾಲಾ-ಕಾಲೇಜುಗಳಲ್ಲಿ ಉತ್ತಮ ವಾಕ್​ ಚಾತುರ್ಯವುಳ್ಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.
ಶಾಸಕ ಯಶ್​ಪಾಲ್​ ಎ ಸುವರ್ಣ ಮಾತನಾಡಿ, ದೇಶದಲ್ಲಿ 1.4 ಕೋಟಿಗೂ ಹೆಚ್ಚು ಜನರಿದ್ದರೂ ಸಹ ನೆಮ್ಮದಿಯ ಜೀವನ ನಡೆಸಲು ಸಂವಿಧಾನದಲ್ಲಿರುವ ಮೂಲ ಅಂಶಗಳೇ ಕಾರಣ. ವಿಶ್ವದಲ್ಲಿಯೇ ಅತೀ ಹೆಚ್ಚು ಯುವ ಸಂಪತ್ತು ಹೊಂದಿರುವ ನಮ್ಮ ದೇಶದ ಯುವಜನತೆಯಲ್ಲಿ ಸಂವಿಧಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ನಾಯಕತ್ವ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ರೂಢಿಸಿಕೊಳ್ಳುವಂತೆ ಪ್ರೇರೇಪಿಸುವುದರೊಂದಿಗೆ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್​ ಮಾತನಾಡಿದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸಂವಿಧಾನದ ಪೀಠಿಕೆ ಬೋಧಿಸಿದರು. ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರವಿಣ ಮೊಗವೀರ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಯುವ ಸಂಸತ್ತು ಕಾರ್ಯಕ್ರಮದ ಪೋಸ್ಟರ್​ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​, ಎಎಸ್​ಪಿ ಸುಧಾಕರ್​ ನಾಯಕ್​, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್​.ಎಸ್​ ಕಾದ್ರೋಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲೂರು ಸ್ವಾಗತಿಸಿ, ಪ್ರಶಾಂತ್​ ಶೆಟ್ಟಿ ಹಾವಂಜೆ ನಿರೂಪಿಸಿ, ವಂದಿಸಿದರು.