ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಎಎಸ್ಪಿ ಅಚ್ಯುತ್ ಅಶೋಕ್ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಬೋಧಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ ಕಲ್ಲಟ್ರ ಮಾಹಿನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಇತರರಿದ್ದರು.
ಕಾಸರಗೋಡು: ದೇಶದ ದೊಡ್ಡ ಆಸ್ತಿಯಾಗಿರುವ ಯುವಜನತೆ ಹಾಗೂ ವಿದ್ಯಾರ್ಥಿ ಸಮುದಾಯ ಮಾದಕ ವ್ಯಸನದ ವಿರುದ್ಧ ಹೋರಾಟ ನಡೆಸಲು ಪಣತೊಡಬೇಕು.ಎಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಕರೆ ನೀಡಿದರು.
ನಶೆಮುಕ್ತ ಭಾರತ ಅಭಿಯಾನ (ಎನ್‌ಎಂಬಿಎ) ಪ್ರಯುಕ್ತ ಕಾಸರಗೋಡು ವಿದ್ಯಾನಗರದ ನಗರಸಭಾ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ‘ನಾನು ತೂಫಾನ್ ಯೋಧ’ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಎಸ್ಪಿ ಅಚ್ಯುತ್ ಅಶೋಕ್ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಬೋಧಿಸಿದರು. ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಶಿಕ್ಷಕಿ ಎಂ.ತುಷಾರಾ ಮಾದಕ ದ್ರವ್ಯಗಳಿಂದ ಉಂಟಾಗುವ ದುರಂತಗಳ ಕುರಿತ ಚಿತ್ರಣ ಪ್ರಸ್ತುತಪಡಿಸಿದರು.
ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ್ದ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿದ್ಯಾರ್ಥಿ ಪೊಲೀಸ್ ಕೆಡೆಟ್‌ಗಳ ನೇತೃತ್ವದಲ್ಲಿ ‘ಎನ್‌ಎಂಬಿಎ ಸ್ಟಾರ್ಮ್- ಐ ಹೇಟ್ ಡ್ರಗ್ಸ್’ ಹೆಸರಿನಲ್ಲಿ ಬೃಹತ್ ಮಾನವ ಸರಪಳಿ ರಚಿಸಿದರು.
ಶಾಸಕ ಕಲ್ಲಟ್ರ ಮಾಹಿನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್, ಕಾಸರಗೋಡು ನಗರಸಭೆ ಅಧ್ಯಕ್ಷೆ ಶಾಹಿನಾ ಸಲೀಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಂ.ದೇವದಾಸನ್, ಶಿಕ್ಷಣ ಉಪ ನಿರ್ದೇಶಕಿ ಟಿ.ಶೈಲಾ, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್ ಉಪಸ್ಥಿತರಿದ್ದರು.
ಸಾಧಕರಿಗೆ ಗೌರವಾರ್ಪಣೆ
ಯೋಗಾಭ್ಯಾಸದಲ್ಲಿ ಏಷ್ಯಾ ಬುಕ್ ಆ್ ವರ್ಲ್ಡ್ ರೆಕಾರ್ಡ್ಸ್ ದಾಖಲೆಗೆ ಸೇರ್ಪಡೆಗೊಂಡ ವಿದ್ಯಾರ್ಥಿನಿ ಅಭಿಜ್ಞಾ, ನೆಲದ ಮೇಲೆ ಅಕ್ಷರ ವಿನ್ಯಾಸಗೊಳಿಸಿದ ಕಲಾವಿದರಾದ ವರದಾ ನಾರಾಯಣನ್ ಮತ್ತು ವಿಜಯಕುಮಾರ್ ಅವರನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸನ್ಮಾನಿಸಿದರು.