ನಾಗರಾಜ್ 
ಉಡುಪಿ

ವರುಣತೀರ್ಥ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

ಕೋಟ ಪೊಲೀಸರು ಪ್ರಕರಣ ದಾಖಲು

ಕೋಟ: ವರುಣತೀರ್ಥ ಕೆರೆಯಲ್ಲಿ ಶನಿವಾರ ಬೆಳಗ್ಗೆ ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೃತರನ್ನು ಗದಗ ಜಿಲ್ಲೆಯ ಮೂಲದ ನಾಗರಾಜ್(38) ಎಂದು ಗುರುತಿಸಲಾಗಿದೆ. ಪ್ರಸ್ತುತ ಸಾಸ್ತಾನ ಗುಂಡ್ಮಿ ಮಡಿವಾಳಕೇರಿ ಚೆನ್ನಕೇಶವ ದೇವಸ್ಥಾನದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶನಿವಾರ ಬೆಳಗ್ಗೆ ನಾಗರಾಜ್ ಸ್ನೇಹಿತ ರಾಹುಲ್ ಜತೆಗೆ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಸಮೀಪದಲ್ಲಿರುವ ವರುಣತೀರ್ಥ ಕೆರೆಯಲ್ಲಿ ಈಜಲು ನೀರಿಗೆ ಇಳಿದಿದ್ದರು. ರಾಹುಲ್ ಈಜು ಬಾರದ ಕಾರಣ ದಡದಲ್ಲೇ ನಿಂತಿದ್ದರು.

ಈಜುತ್ತಿದ್ದ ನಾಗರಾಜ್ ಕೆರೆಯ ಮಧ್ಯಭಾಗದಲ್ಲಿರುವ ಶಿವಲಿಂಗವನ್ನು ಮುಟ್ಟಿ ವಾಪಸ್ ಬರುವುದಾಗಿ ಹೇಳಿ ಆಳವಾದ ಪ್ರದೇಶದತ್ತ ತೆರಳಿದ್ದಾರೆ. ಆದರೆ ಕೆರೆಯ ಮಧ್ಯಭಾಗದಲ್ಲಿ ನೀರಿನ ಆಳ ಹೆಚ್ಚಾಗಿದ್ದರಿಂದ ಈಜಲಾಗದೆ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ನಾಗರಾಜ್ ನೀರಿನಲ್ಲಿ ಮುಳುಗುವುದನ್ನು ಗಮನಿಸಿದ ರಾಹುಲ್ ಕೂಗಿಕೊಂಡಿದ್ದು, ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಸ್ಥಳೀಯರು ಕೆರೆಯಲ್ಲಿ ಹುಡುಕಾಟ ನಡೆಸಿದರೂ ಅಷ್ಟರಲ್ಲಾಗಲೇ ನಾಗರಾಜ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಬಳಿಕ ಅವರ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು. ಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ಆಗಮಿಸಿ ಸಹಕಾರ ನೀಡಿದರು. ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.