Crime 
ಉಡುಪಿ

ಯುವತಿಗೆ ಹಲ್ಲೆಗೈದು ಅಪಹರಣ

ಕಾಸರಗೋಡು: ಯುವತಿಗೆ ಹಲ್ಲೆ ನಡೆಸಿ ಕಾರಿನಲ್ಲಿ ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಬೀದ್, ತಾಹಿರ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ಓಣಿಬಾಗಿಲುವಿನಲ್ಲಿ ಸ್ಕೂಟರ್ ಕಳವು

ಕಾಸರಗೋಡು: ಎಣ್ಮಕಜೆ ಪಂಚಾಯಿತಿ ಬಾಡೂರು ಸಮೀಪದ ಓಣಿಬಾಗಿಲು ಅರಜೆಗುರಿ ನಿವಾಸಿ ಇಬ್ರಾಹಿಂ ಎ. (63) ಎಂಬುವರ ಸ್ಕೂಟರ್ ಕಳವಾಗಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೆ.3ರಂದು ರಾತ್ರಿ 10ರಿಂದ ಸೆ.4ರ ಬೆಳಗಿನ ಜಾವ 4 ಗಂಟೆಯೊಳಗೆ ಸ್ಕೂಟರ್ ಕಳವಾಗಿರುವುದಾಗಿ ಇಬ್ರಾಹಿಂ ದೂರಿನಲ್ಲಿ ತಿಳಿಸಿದ್ದಾರೆ.

ಬಾವಿಗೆ ಬಿದ್ದ ಬಾಲಕನ ರಕ್ಷಣೆ

ಕಾಸರಗೋಡು: ಪೈಕ ಸಮೀಪದ ಅರ್ಲಡ್ಕದಲ್ಲಿ ಬಾವಿಗೆ ಬಿದ್ದ ಅಜ್ಮಲ್ ಎಂಬುವರ ಪುತ್ರ, ಪ್ಲಸ್‌ವನ್ ವಿದ್ಯಾರ್ಥಿ ಅಫ್ರಾಸ್(16)ನನ್ನು ಅಗ್ನಿಶಾಮಕ ದಳ ಹಾಗೂ ಊರವರು ಸೇರಿ ರಕ್ಷಿಸಿದ್ದಾರೆ. ಬಾಲಡ್ಕದ ಮಸೀದಿಯಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಕಾರ್ಯಕ್ರಮದ ಕೊನೆಯ ದಿನವಾದ ಭಾನುವಾರ ಅಫ್ರಾಸ್ ಭಾಗವಹಿಸಿದ್ದು, ಅಲ್ಲೇ ಪಕ್ಕದ ಆವರಣವಿಲ್ಲದ ಬಾವಿಗೆ ಆಯತಪ್ಪಿ ಬಿದ್ದಿದ್ದಾನೆ. ಅದನ್ನು ನೋಡಿದ ಸ್ಥಳೀಯರ‌್ಬೊರು ಬಾವಿಗಿಳಿದು ಹಗ್ಗದ ಸಹಾಯದಿಂದ ಬಾಲಕನನ್ನು ಹಿಡಿದು ನಿಲ್ಲಿಸಿದರು. ಕಾಸರಗೋಡು ಅಗ್ನಿಶಾಮಕ ದಳದವರು ಆಗಮಿಸಿ ಬಾಲಕನನ್ನು ಬಾವಿಯಿಂದ ಮೇಲಕ್ಕೆತ್ತಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನ ಕಾಲಿಗೆ ಗಂಭೀರ ಗಾಯವಾಗಿದೆ.

ಕಾರು ಅಡ್ಡಗಟ್ಟಿ ಹಲ್ಲೆ, 33 ಮಂದಿ ವಿರುದ್ಧ ಪ್ರಕರಣ

ಕಾಸರಗೋಡು: ಕಾರು ತಡೆದು ಯುವಕನ ಮೇಲೆ ಹಲ್ಲೆ ನಡೆಸಿ ಕಾರಿಗೆ ಹಾನಿಯುಂಟುಮಾಡಿದ ಪ್ರಕರಣಕ್ಕೆ ಸಂಬಂಧಿಸಿ 33 ಮಂದಿ ವಿರುದ್ಧ ಹೊಸದುರ್ಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಸದುರ್ಗ ಕಡಪ್ಪುರದ ಮೊಹಮ್ಮದ್ ತಾಹೀರ್(30) ಎಂಬುವರ ಕಾರನ್ನು ತಡೆದು, ಹಲ್ಲೆ ನಡೆಸಿರುವುದಲ್ಲದೆ, ಕಾರನ್ನು ಕಲ್ಲಿನಿಂದ ಹೊಡೆದು 2.5 ಲಕ್ಷ ರೂ. ತನಕ ನಷ್ಟ ಉಂಟುಮಾಡಿರುವ ಬಗ್ಗೆ ಗಾಯಾಳು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಸೌಖ್ಯ ಬಾಧಿಸಿ ವಿದ್ಯಾರ್ಥಿನಿ ಮೃತ್ಯು

ಕಾಸರಗೋಡು: ಉಪ್ಪಳ ಪುಳಿಕುತ್ತಿ ಸಮೀಪದ ಅಗರ್ತಿಮೂಲೆ ನಿವಾಸಿ ಪೌಲೋಸ್ ಕೆ.ಪಿ.-ಶಾಂತಿ ಡಿಸೋಜ ದಂಪತಿ ಪುತ್ರಿ, ವಿದ್ಯಾರ್ಥಿನಿ ನಿಶಿತಾ ಕೆ.ಪಿ (18)ಅಸೌಖ್ಯದಿಂದ ನಿಧನರಾದರು. ಕಳೆದ ಎಂಟು ತಿಂಗಳಿಂದ ಬ್ಲಡ್ ಕ್ಯಾನ್ಸರ್‌ಗೆ ತುತ್ತಾಗಿ ಹಲವಾರು ಕಡೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳೂರಿನ ಬಲ್ಮಠ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು.

ಅಪಘಾತ ಗಾಯಾಳು ಸಾವು

ಕಾಸರಗೋಡು: ಹೊಸಂಗಡಿಯ ವಾಮಂಜೂರು ಚೆಕ್‌ಪೋಸ್ಟ್ ಸಮೀಪ ಭಾನುವಾರ ಸಂಜೆ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಯುವಕ, ಪೈವಳಿಕೆ ಸಮೀಪದ ಚಿಪ್ಪಾರು ಕಡಂಗೋಡು ನಿವಾಸಿ ಕಿರಣ್ ಕುಮಾರ್(32) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಲಾರಿ ಡಿಕ್ಕಿಯಾದ ಪರಿಣಾಮ ನಿಯಂತ್ರಣ ಕಳೆದುಕೊಂಡ ಬೈಕ್ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿ ಪಲ್ಟಿಯಾಗಿತ್ತು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಿರಣ್ ಕುಮಾರ್ ಹಾಗೂ ಸ್ನೇಹಿತ, ಕಡಂಗೋಡು ನಿವಾಸಿ ಹರೀಶ್ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕಿರಣ್ ಕುಮಾರ್ ಮೃತಪಟ್ಟಿದ್ದಾರೆ. ಹರೀಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಯಿಕ್ಕೋಡಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೇಟೆಗೆಂದು ತೆರಳಿದ್ದ ಯುವತಿ ನಾಪತ್ತೆ

ಕಾಸರಗೋಡು: ಕುಂಬಳೆ ರೈಲು ನಿಲ್ದಾಣ ಸಮೀಪದ ನಿವಾಸಿ ಹನೀನಾ(26) ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂಬಳೆ ಪೇಟೆಗೆಂದು ತಿಳಿಸಿ ಆ.10ರಂದು ಮನೆಯಿಂದ ಹೊರಟಿದ್ದ ಹನೀನಾ ವಾಪಸಾಗಿಲ್ಲ. ಈಕೆ ಮೊಬೈಲ್‌ಗೆ ಕರೆಮಾಡಿದಾಗ ತಾನು ಮಣ್ಣಾರ್ ಕಾಡಿನಲ್ಲಿರುವುದಾಗಿ ತಿಳಿಸಿದ್ದರೂ, ನಂತರ ಸ್ವಿಚ್‌ಆಫ್ ಆಗಿದೆ ಎಂದು ಯುವತಿ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ವ್ಯಾಪಾರಿ ನೇಣುಬಿಗಿದು ಆತ್ಮಹತ್ಯೆ

ಕಾಸರಗೋಡು: ಕುತ್ತಿಕ್ಕೋಲ್ ಚೆರಿಯಡ್ಕ ನಿವಾಸಿ, ಸಿಪಿಐ ಕಾರ್ಯಕರ್ತ ಅಶೋಕನ್(49)ಅವರ ಮೃತದೇಹ ಅವರ ಹೋಟೆಲ್‌ನ ಅಡುಗೆ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಿಪಿಐ ಕುತ್ತಿಕ್ಕೋಲ್ ಸ್ಥಳೀಯ ಸಮಿತಿ ಸದಸ್ಯರಾಗಿದ್ದರು. ಹೋಟೆಲ್‌ಗೆ ಬಂದ ಗ್ರಾಹಕರೊಬ್ಬರು ನೀಡಿದ ಮಾಹಿತಿಯಂತೆ ಸ್ಥಳೀಯರು ತಕ್ಷಣ ಅಶೋಕನ್ ಅವರನ್ನು ನೇಣಿಂದ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಕಳೆದ ಕೆಲವು ವರ್ಷಗಳಿಂದ ಕುತ್ತಿಕೋಲಿನಲ್ಲಿ ಸಣ್ಣ ಹೋಟೆಲ್ ವ್ಯಾಪಾರ ನಡೆಸುತ್ತಿದ್ದರು. ನಾಟಕ ಕಲಾವಿದ ಹಾಗೂ ಕಲಾ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಬೇಡಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.