ಎಕ್ಸೆಲ್ ಕಾಲೇಜಿನಲ್ಲಿ ದಿಗ್ದರ್ಶನ ಕಾರ್ಯಕ್ರಮವನ್ನು ಲೆಫ್ಟಿನೆಂಟ್ ಕರ್ನಲ್ ರೋಹಿತ್ ಪ್ರಕಾಶ್ ರೈ ಉದ್ಘಾಟಿಸಿದರು. ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ, ಡಾ.ಪ್ರಜ್ವಲ್ ಕಜೆ, ಶ್ರೀಮಂತ್ ಮೊದಲಾದವರಿದ್ದರು.
ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಯುದ್ಧವು ಕೇವಲ ನೆಲದ ಮೇಲೆ ನಡೆಯದೆ ತಾಂತ್ರಿಕತೆಯೊಂದಿಗೆ ನಡೆಯುತ್ತಿದೆ. ದೇಶದ ಸೇವೆ ಮಾಡಲು ಕೇವಲ ರೈಫಲ್(ಬಂದೂಕು) ಹಿಡಿಯಬೇಕಾದ ಅಗತ್ಯವಿಲ್ಲ. ದೇಶದ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ನಾವು ಇರುವ ಸ್ಥಾನದಲ್ಲೇ ಇದ್ದುಕೊಂಡು ದೇಶದ ಸೇವೆ ಮಾಡಬಹುದು ಎಂದು 18 ಕರ್ನಾಟಕ ಬೆಟಾಲಿಯನ್ ಮಂಗಳೂರಿನ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ರೋಹಿತ್ ಪ್ರಕಾಶ್ ರೈ ಹೇಳಿದರು.
ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌ಡಿಎ ಬ್ಯಾಚ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ದಿಗ್ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಮಾತನಾಡಿ, ಹತ್ತಾರು ಅವಕಾಶಗಳನ್ನು ತ್ಯಜಿಸಿ ದೇಶ ಸೇವೆಗೆ ತೊಡಗುವ ಭಾರತೀಯ ಸೈನಿಕರ ಹಿರಿತನಕ್ಕೆ ಗೌರವ ಸಲ್ಲಬೇಕು ಎಂದರು.
ಪ್ಲಸ್ ಟು ನಂತರ ರಕ್ಷಣಾ ಸೇವೆಗೆ ಸೇರಲು ಇರುವ ತಾಂತ್ರಿಕ ಪ್ರವೇಶ ಯೋಜನೆ ಮತ್ತು ವಿವಿಧ ಪ್ರವೇಶ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಅರಮಲೆಬೆಟ್ಟ ಕ್ಯಾಂಪಸ್‌ನ ಪ್ರಾಂಶುಪಾಲ ಡಾ.ಪ್ರಜ್ವಲ್ ಕಜೆ, ಎಸ್‌ಡಿಎಂ ಆರ್ಮಿ ಘಟಕದ ಮಾಜಿ ಎನ್‌ಸಿಸಿ ಕೆಡೆಟ್ ಶ್ರೀಮಂತ್, ಎಕ್ಸೆಲ್ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎನ್‌ಡಿಎ ಸಂಯೋಜಕ ಜೋಸ್ಟಮ್ ಎ.ಟಿ. ಸ್ವಾಗತಿಸಿದರು. ಪ್ರಾಧ್ಯಾಪಕಿ ಸಹನಾ ವಂದಿಸಿದರು.