ಶ್ರೀ ಕ್ಷೇತ್ರ ಕಾರಿಂಜದಲ್ಲಿ ಸಂಸದ ಕ್ಯಾ. ಚೌಟ ನೇತೃತ್ವದ 3ನೇ ಆವೃತ್ತಿಯ ‘ಯೋಗ ವಿದ್ ಯೋಧ’ ಕಾರ್ಯಕ್ರಮ ಜರುಗಿತು.
ಮಂಗಳೂರು: ಐತಿಹಾಸಿಕ ಶ್ರೀ ಕ್ಷೇತ್ರ ಕಾರಿಂಜೇಶ್ವರ ಬೆಟ್ಟದ ಆವರಣದಲ್ಲಿ ಯೋಗ ವಿದ್ ಯೋಧ ಬೃಹತ್ ಯೋಗಾಭ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು. ಪ್ರಕೃತಿ ಹಾಗೂ ದೈವಿಕತೆಯ ಮಡಿಲಲ್ಲಿ ಮನಸ್ಸನ್ನು ಶಾಂತಗೊಳಿಸಿ, ದೇಹವನ್ನು ಹತೋಟಿಗೆ ತರುವ ಈ ಅಪೂರ್ವ ಯೋಗಾಭ್ಯಾಸಕ್ಕೆ ಪ್ರಕೃತಿ ರುದ್ರ ರಮಣೀಯ ಕೊಡ್ಯಾಮಲೆ ಬೆಟ್ಟಗಳ ಶ್ರೇಣಿ ಸಾಕ್ಷಿಯಾಯಿತು.
ಸಂಸದ ಕ್ಯಾ. ಬ್ರಿಜೇಶ್ ಚೌಟ ನೇತೃತ್ವದಲ್ಲಿನೂರಾರು ಯೋಗಾಸಕ್ತರು ಭಾಗವಹಿಸಿದ್ದರು. ಪ್ರಖ್ಯಾತ ಯೋಗಪಟು ಗೋಪಾಲಕೃಷ್ಣ ದೇಲಂಪಾಡಿ ಮಾರ್ಗದರ್ಶನದಲ್ಲಿ ವಿವಿಧ ಯೋಗಾಸನ ಹಾಗೂ ಪ್ರಾಣಾಯಾಮ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು, ಯುವಕರು, ನಟ-ನಟಿಯರು ಹಾಗೂ ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಮಹತ್ವವನ್ನು ಸಾರಿದರು.
ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಸ್ಕಾಲರ್‌ಶಿಪ್ ವಿತರಿಸಿ ಗೌರವಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ‘ಯೋಗ ವಿದ್ ಯೋಧ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೊದಲ ವರ್ಷ ಸಸಿಹಿತ್ಲುವಿನ ಕಡಲ ಕಿನಾರೆಯಲ್ಲಿ ಹಾಗೂ ಕಳೆದ ಬಾರಿ ಐತಿಹಾಸಿಕ ಸೋಮೇಶ್ವರ ದೇಗುಲದ ಅಂಗಣದಲ್ಲಿ ನಡೆದಿತ್ತು.