ಶಾಸಕ ಯಶ್​ ಪಾಲ್​ ಸುವರ್ಣ  
ಉಡುಪಿ

ಹಿಜಾಬ್​ ನಿಷೇಧ ಹಿಂಪಡೆದು ಶಿಕ್ಷಣ ವ್ಯವಸ್ಥೆ ಇಸ್ಲಾಮೀಕರಣ: ಯಶ್​ಪಾಲ್​

ಉಡುಪಿ: ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್​ ನಿಷೇಧ ಆದೇಶವನ್ನು ರಾಜ್ಯ ಕಾಂಗ್ರೆಸ್​ ಸರ್ಕಾರ ಹಿಂಪಡೆಯುವ ಮೂಲಕ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಇಸ್ಲಾಮೀಕರಣಗೊಳಿಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್​ ಸರ್ಕಾರ ಮುಂದಾಗಿದೆ ಎಂದು ಉಡುಪಿ ಶಾಸಕ ಯಶ್​ ಪಾಲ್​ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2021ರಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 6 ಮಂದಿ ವಿದ್ಯಾರ್ಥಿನಿಯರು ದುರುದ್ದೇಶ ಪೂರ್ವಕವಾಗಿ ಹಿಜಾಬ್​ ಅವಕಾಶ ನೀಡುವಂತೆ ಆಗ್ರಹಿಸಿ ವಿವಾದ ಸೃಷ್ಟಿಸಿದ್ದರು. ಈ ಸಂದರ್ಭದಲ್ಲಿ ಕೆಲವು ಮತೀಯವಾದಿ ನಿಷೇಧಿತ ಸಂಘಟನೆಗಳು ಹಿಜಾಬ್​ ವಿವಾದದ ಮೂಲಕ ಶಾಂತಿ ಸುವ್ಯವಸ್ಥೆಗೂ ಧಕ್ಕೆ ತರುವ ಪ್ರಯತ್ನ ಮಾಡಿರುವುದನ್ನು ರಾಜ್ಯದ ಜನತೆ ಮರೆತಿಲ್ಲ. ಕೇವಲ ಅಲ್ಪಸಂಖ್ಯಾಂತರ ಓಲೈಕೆಗಾಗಿ ಹಿಜಾಬ್​ ನಿಷೇಧ ಆದೇಶವನ್ನು ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಹಿಜಾಬ್​ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್​ ತ್ರಿಸದಸ್ಯ ಪೀಠ ತೀರ್ಪು ನೀಡಿದ್ದರೂ ಹಿಜಾಬ್​ ಧರಿಸಲು ಅವಕಾಶಕ್ಕೆ ಅತಿ ಮುತುವರ್ಜಿ ವಹಿಸುತ್ತಿರುವ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು. ಕೇವಲ ರಾಜಕೀಯ ಉದ್ದೇಶಕ್ಕಾಗಿ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸಿ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಲು ಅವಕಾಶ ನೀಡುವುದಿಲ್ಲ ಎಂದು ಶಾಸಕ ಯಶ್​ ಪಾಲ್​ ಸುವರ್ಣ ಎಚ್ಚರಿಸಿದ್ದಾರೆ.