ಯಕ್ಷಗಾನದ ಹಿರಿಯ ಮದ್ದಲೆ ವಾದಕ ಕೃಷ್ಣಸ್ವಾಮಿ ಜೋಯಿಸ್.
* ಪ್ರಸಾಧನ ತಜ್ಞರಾಗಿಯೂ ಖ್ಯಾತಿ
ಉಡುಪಿ: ಬ್ರಹ್ಮಾವರ ಚಾಂತಾರು ನಿವಾಸಿ, ಬಡಗುತಿಟ್ಟಿನ ಹಿರಿಯ ಮದ್ದಲೆ ವಾದಕ ಹಾಗೂ ಯಕ್ಷಗಾನ ಗುರುಗಳೂ ಆದ ಕೃಷ್ಣಸ್ವಾಮಿ ಜೋಯಿಸ್ (75) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ (ಆ.4) ಬೆಳಗ್ಗೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಅಜಪುರ ಯಕ್ಷಗಾನ ಮಂಡಳಿಯ ಗೌರವಾಧ್ಯಕ್ಷರಾಗಿದ್ದ ಕೃಷ್ಣಸ್ವಾಮಿ, ಮಣ್ಣಿನ ಗಣಪತಿ ಮೂರ್ತಿ ನಿರ್ಮಾಣದಲ್ಲಿಯೂ ಪ್ರವೀಣರಾಗಿದ್ದರು. ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ದೀರ್ಘಕಾಲ ಮದ್ದಲೆವಾದಕರಾಗಿ ಸೇವೆಗೈದಿದ್ದು, ದೇಶ, ವಿದೇಶಗಳ ಪ್ರದರ್ಶನಗಳಲ್ಲಿ ಹಿಮ್ಮೇಳ ವಾದಕರಾಗಿ, ಪ್ರಸಾಧನ ಕಲಾವಿದರಾಗಿ ಪಾಲ್ಗೊಂಡಿದ್ದರು.
ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಮೊದಲ ತಂಡದ ವಿದ್ಯಾರ್ಥಿಯಾಗಿದ್ದ ಇವರು, ಭಾಗವತ ನಾರ್ಣಪ್ಪ ಉಪ್ಪೂರ ಮತ್ತು ಬೇಳಂಜೆ ತಿಮ್ಮಪ್ಪ ನಾಯಕ ಅವರ ಶಿಷ್ಯರಾಗಿದ್ದರು. ಭಾಗವತಿಕೆ ಮತ್ತು ಮದ್ದಲೆ ವಾದನದಲ್ಲಿ ವಿಶೇಷ ಪರಿಣತಿ ಹೊಂದಿದ್ದರು. ಎಚ್.ಸುಬ್ಬಣ್ಣ ಭಟ್ಟ ಮಾರ್ಗದರ್ಶನದಲ್ಲಿ ಪ್ರಸಾಧನ ತಜ್ಞರಾಗಿಯೂ ದೀರ್ಘಕಾಲ ಸೇವೆ ಸಲ್ಲಿಸಿದ್ದರು.
ಯಕ್ಷಗಾನದ ಹಿಮ್ಮೇಳ ಹಾಗೂ ಮುಮ್ಮೇಳ ಎರಡರಲ್ಲೂ ಪಾರಂಪರಿಕ ಸೂಕ್ಷ$್ಮತೆ ಬಲ್ಲ ಜೋಯಿಸರು ನೂರಾರು ಶಿಷ್ಯರನ್ನೂ ರೂಪಿಸಿದ್ದಾರೆ. ಯಕ್ಷಶಿಕ್ಷಣ ಟ್ರಸ್ಟ್ನಲ್ಲೂ ಹಲವಾರು ವರ್ಷ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಯು 'ಯಕ್ಷಗಾನ ಕಲಾರಂಗ' ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ ಎಂದು ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ಮಾಹಿತಿ ನೀಡಿದ್ದಾರೆ.