ಉಡುಪಿ: ಯಕ್ಷಗಾನದ ಮೇರು ಕಲಾವಿದ ಥಂಡಿಮನೆ ಶ್ರೀಪಾದ ತಿಮ್ಮಣ್ಣ ಭಟ್ಟ (63) ಅನಾರೋಗ್ಯದಿಂದಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಅ.14ರಂದು ನಿಧನರಾದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ ದತ್ತುಪುತ್ರನನ್ನು ಅಗಲಿದ್ದಾರೆ.
ಯಕ್ಷಗಾನ ವಲಯದಲ್ಲಿ 'ಥಂಡಿಮನೆ' ಎಂದೇ ಪ್ರಸಿದ್ಧರಾಗಿದ್ದು, ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಯಕ್ಷಗಾನ ಅಭ್ಯಾಸ ನಡೆಸಿ 20ರ ಹರೆಯದಲ್ಲೇ ಯಕ್ಷರಂಗ ಪ್ರವೇಶಿಸಿದ್ದರು.
ತಂದೆಯೂ ಯಕ್ಷಗಾನ ಕಲಾವಿದರಾಗಿದ್ದರಿಂದ ಬಾಲ್ಯದಲ್ಲಿಯೇ ಈ ಕಲೆಯತ್ತ ಆಸಕ್ತಿ ಹೊಂದಿದ್ದು ಪ್ರೋತ್ಸಾಹವೂ ಲಭಿಸಿತ್ತು. ಯಕ್ಷಗಾನದಲ್ಲಿ ಎರಡನೆಯ ವೇಷಕ್ಕೆ ಬೇಕಾದ ಸ್ವರಭಾರ, ಆಳಂಗ, ರಂಗ ನಿರ್ವಹಣಾ ಕ್ರಮದಿಂದ ಸಮರ್ಥ ಕಲಾವಿದರೆಂದು ಖ್ಯಾತರಾಗಿದ್ದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಂಚಲಿಂಗ ಮೇಳ, ಶಿರಸಿ ಮಾರಿಕಾಂಬಾ ಮೇಳ, ಸಾಲಿಗ್ರಾಮ, ಮಂದಾರ್ತಿ ಹಾಗೂ ಪೆರ್ಡೂರು ಮೇಳಗಳಲ್ಲಿ ಎರಡನೇ ವೇಷಧಾರಿಯಾಗಿ ನಾಲ್ಕು ದಶಕಗಳ ಕಾಲ ಸೇವೆ ಗೈದಿದ್ದರು. ಈಶ್ವರ, ದಶರಥ, ಸಾಲ್ವ, ಭೀಷ್ಮ, ಕಾರ್ತವೀರ್ಯ, ಯಮ, ಶುಕ್ರಾಚಾರ್ಯ, ಯಯಾತಿ, ದುಷ್ಟಬುದ್ಧಿ, ರಕ್ತಜಂಘ, ವಲಲ, ಕಂಸ ಹೀಗೆ ಪೌರಾಣಿಕದ ಹಲವು ಪಾತ್ರಗಳು ಕಲಾರಸಿಕರ ಮೆಚ್ಚುಗೆ ಗಳಿಸಿದ್ದವು.
ಅವರ ಯಕ್ಷ ಸಾಧನೆ ಗುರುತಿಸಿ ಎರಡು ವರ್ಷದ ಹಿಂದೆ ಉಡುಪಿಯ ಯಕ್ಷಗಾನ ಕಲಾರಂಗವು 'ಯಕ್ಷಗಾನ ಕಲಾರಂಗ ಪ್ರಶಸ್ತಿ' ನೀಡಿ ಗೌರವಿಸಿತ್ತು ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ತಿಳಿಸಿದ್ದಾರೆ.