ಉಡುಪಿಯಲ್ಲಿ ಯಕ್ಷಗಾನದ ಸ್ತ್ರೀ ವೇಷಧಾರಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರಿಗೆ 'ಯಕ್ಷ ಸಾಧಕ' ಪ್ರಶಸ್ತಿ ನೀಡಲಾಯಿತು. ಡಾ.ಎಚ್​.ಎಸ್​. ಬಲ್ಲಾಳ್​, ಡಾ. ಜಿ.ಶಂಕರ್​, ಪುರುಷೋತ್ತಮ್​ ಶೆಟ್ಟಿ, ಭುವನಪ್ರಸಾದ್​ ಹೆಗ್ಡೆ, ಪಳ್ಳಿ ಕಿಶನ್​ ಹೆಗ್ಡೆ, ಡಾ. ಬಿ. ಜಗದೀಶ್​ ಶೆಟ್ಟಿ ಇದ್ದರು. 
ಉಡುಪಿ

ಮೇಳಗಳ ಯಜಮಾನರ ಋಣ ತೀರಿಸಲಾಗದು

* ಖ್ಯಾತ ಸ್ತ್ರೀ ವೇಷಧಾರಿ ಸುಬ್ರಹ್ಮಣ್ಯ ಯಲಗುಪ್ಪ ಕೃತಜ್ಞತೆ

* ಗುರು ಮಟಪಾಡಿ 'ಯಕ್ಷ ಸಾಧಕ' ಪ್ರಶಸ್ತಿ ಸ್ವೀಕಾರ

ಉಡುಪಿ: ವಶೀಲಿಯಲ್ಲಿ ಪ್ರಶಸ್ತಿಗಳನ್ನು ಪಡೆಯಬೇಕಾದ ಸಂದರ್ಭ ಇರುವಾಗ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಸಂತಸ ಉಂಟಾಗಿದೆ. ದೇವರು ಕೊಟ್ಟ ಆಶೀರ್ವಾದವಿದು. ಭಾಗವತಿಕೆ ಕಲಿಯೆಂದು ಕೆರೆಮನೆ ಕೇಂದ್ರಕ್ಕೆ ಬಂದಿದ್ದ ನಾನು ಯಕ್ಷಗುರು ಹೆರಂಜಾಲು ವೆಂಕಟರಮಣ ಗಾಣಿಗ ಅವರ ಆಶಯದಂತೆ ಸ್ತ್ರೀ ವೇಷಧಾರಿಯಾಗಿ ಪ್ರೇಕ್ಷಕರ ಮನಗೆದ್ದಿದ್ದೇನೆ. ಸಾಮರ್ಥ್ಯವಿದ್ದರೂ ನಾನಿಂದು ಹೆಸರು ಗಳಿಸುವಂತಾಗಲು ವೇದಿಕೆ ಒದಗಿಸಿದ ಮೇಳಗಳ ಯಜಮಾನರನ್ನು ಮರೆಯಲಾರೆ. ಅವರ ಋಣ ತೀರಿಸಲಾಗದು ಎಂದು ಖ್ಯಾತ ಸ್ತ್ರೀ ವೇಷಧಾರಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಕೃತಜ್ಞತೆ ಸಲ್ಲಿಸಿದರು.
ಉಡುಪಿಯ ಪುರಭವನದಲ್ಲಿ ಯಕ್ಷಗಾನ ಕೇಂದ್ರ ಇಂದ್ರಾಳಿ, ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್​ (ರಿ.) ಉಡುಪಿ, ಜಿ.ಶಂಕರ್​ ಫ್ಯಾಮಿಲಿ ಟ್ರಸ್ಟ್​ ಅಂಬಲಪಾಡಿ ಉಡುಪಿ ಹಾಗೂ ಉಜ್ವಲ್​ ಡೆವಲಪರ್ಸ್​ ಉಡುಪಿ ಇವರ ಸಹಕಾರದಲ್ಲಿ ಶನಿವಾರ (ಆ.1) ಸಂಜೆ ಆಯೋಜಿಸಿದ್ದ ಗುರು ಮಟಪಾಡಿ ವೀರಭದ್ರ ನಾಯಕ್​ ಸ್ಮರಣಾರ್ಥ 25 ಸಾವಿರ ರೂ. ನಗದು, ಸ್ಮರಣಿಕೆಯ 'ಯಕ್ಷ ಸಾಧಕ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಯಕ್ಷಪೋಷಕ ಗೌರವ

ಮಾಹೆ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಮಾತನಾಡಿ, ತಂದೆಯ ಸ್ಮರಣಾರ್ಥದ 5ನೇ ವರ್ಷದ ಪ್ರಶಸ್ತಿ ಇದಾಗಿದ್ದು, ಈ ಮೊದಲು 4 ಪ್ರಶಸ್ತಿಯನ್ನು ಪುರುಷ ಪಾತ್ರಧಾರಿಗಳಿಗೆ ನೀಡಲಾಗಿದೆ. ಯಲಗುಪ್ಪ ಅವರು ನೋಡಲು ಸಹಜ ಸುಂದರರಾಗಿದ್ದು, ಪಾತ್ರಧಾರಿಯಾಗಿ ಅವರ ಹಾವ-ಭಾವ ಯಾರಿಂದಲೂ ಮೀರಿಸಲಾಗದು. ಯಕ್ಷ ಮೇಳ ನಡೆಸುವುದು ಇಂದು ಸುಲಭದ ಕೆಲಸವಲ್ಲ. ಉತ್ತಮವಾಗಿ ಮೇಳ ನಡೆಸುತ್ತಿರುವ ಯಜಮಾನರನ್ನು ಪ್ರೋತ್ಸಾಹಿಸಿಲು ಟ್ರಸ್ಟ್​ ವತಿಯಿಂದ 'ಯಕ್ಷ ಪೋಷಕ' ಗೌರವ ಪುರಸ್ಕಾರ ನೀಡಲಿದ್ದೇವೆ. ಆ.23ರಂದು ಇದೇ ಪುರಭವನದಲ್ಲಿ ಪೆರ್ಡೂರು ಮೇಳದ ಯಜಮಾನರಿಗೆ ನೀಡಲಾಗುತ್ತಿದೆ. ಬಳಿಕ 'ಕೃಷ್ಣಾರ್ಜುನ ಕಾಳಗ' ಯಕ್ಷಗಾನ ನಡೆಯಲಿದೆ ಎಂದರು. 
ಜಿ.ಶಂಕರ್​ ಫ್ಯಾಮಿಲಿ ಟ್ರಸ್ಟ್​ನ ಪ್ರವರ್ತಕ ನಾಡೋಜ ಡಾ. ಜಿ.ಶಂಕರ್​, ಉಜ್ವಲ್​ ಡೆವೆಲಪರ್ಸ್​ನ ಪ್ರವರ್ತಕ ಪುರುಷೋತ್ತಮ್​ ಶೆಟ್ಟಿ, ಯಕ್ಷಗಾನ ಕೇಂದ್ರ ಇಂದ್ರಾಳಿಯ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್​ ಹೆಗ್ಡೆ ಉಪಸ್ಥಿತರಿದ್ದರು.
ಹವ್ಯಾಸಿ ಭಾಗವತ ರಾಮಕೃಷ್ಣ ಅವರು ಗಣಪತಿ ಸ್ತುತಿ ಹಾಡಿದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್​ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭುವನಪ್ರಸಾದ್​ ಹೆಗ್ಡೆ ಪ್ರಶಸ್ತಿ ಪತ್ರ ವಾಚಿಸಿದರು. ಎಂಜಿಎಂ ಕಾಲೇಜಿನ ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು.
ಇದೇವೇಳೆ ಜು.31ರಂದು ನಿಧನರಾದ ಬಡಗುತಿಟ್ಟಿನ ಪ್ರತಿಭಾಸಂಪನ್ನ ಹಾಸ್ಯಕಲಾವಿದ, 'ಹಾಸ್ಯ ಚಕ್ರವರ್ತಿ' ಖ್ಯಾತಿಯ ಕಾಸರಕೋಡು ಶ್ರೀಧರ್​ ಭಟ್​ ಅವರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. 
ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಒಗ್ಗೂಡುವಿಕೆಯಲ್ಲಿ 'ತಾಮ್ರಧ್ವಜ ಕಾಳಗ' ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.