'ಮುಡಾರೆ' ಖ್ಯಾತಿಯ ಹಾಸ್ಯ ಕಲಾವಿದ ಸೀತಾರಾಮ ಹೆಗಡೆ. 
ಉಡುಪಿ

ಯಕ್ಷಗಾನ ಕಲಾವಿದ ಸೀತಾರಾಮ ಹೆಗಡೆ ನಿಧನ

* 'ಮುಡಾರೆ' ಖ್ಯಾತಿಯ ಉತ್ತರ ಕನ್ನಡ ಜಿಲ್ಲೆಯ ಹಾಸ್ಯ ಕಲಾವಿದ

ಉಡುಪಿ: ಯಕ್ಷಗಾನ ರಂಗದಲ್ಲಿ 'ಮುಡಾರೆ' ಎಂದೇ ಪರಿಚಿತರಾಗಿದ್ದ ಮುಡಾರೆ ಸೀತಾರಾಮ ಹೆಗಡೆ (63) ಸೆ.17ರಂದು ನಿಧನರಾದರು. 
ಮೂಲತ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದವರಾಗಿದ್ದ ಅವರು, ಮಂಕಿ ಸಮೀಪದ ಮುಡಾರೆಯಲ್ಲಿ ನೆಲೆಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಹದಿನಾರರ ವಯಸ್ಸಿನಲ್ಲಿಯೇ ಯಕ್ಷಗಾನದ ಸೆಳೆತದಿಂದಾಗಿ ಈ ಕ್ಷೇತ್ರಕ್ಕೆ ಬಂದಿದ್ದರು. ಕೋಟ ಶಿವರಾಮ ಕಾರಂತ ಮತ್ತು ಕೆರೆಮನೆ ಶಂಭು ಹೆಗಡೆ ಅವರಂತಹ ದಿಗ್ಗಜರ ಮಾರ್ಗದರ್ಶನ ಲಭಿಸಿತ್ತು. ನಾಗರಕೋಡಿಗೆ, ಗುಂಡಬಾಳ, ಕೆರೆಮನೆ, ಬಚ್ಚಗಾರು, ಕುಮಟಾ ಮೇಳಗಲ್ಲಿ ಕಲಾಸೇವೆ ಗೈದಿದ್ದರು.
ದೀರ್ಘಕಾಲ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದ ಅವರು, ಹಾಸ್ಯ ಪಾತ್ರಗಳಲ್ಲಿ ವಿಶೇಷ ಸಿದ್ಧಿ ಹಾಗೂ ಪ್ರಸಿದ್ಧಿ ಪಡೆದಿದ್ದರು. ಪುರುಷ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದ್ದರು. 
ಕಲಾಸಂಘವನ್ನೂ ಸ್ಥಾಪಿಸಿ ಮಕ್ಕಳಿಗೆ ತರಬೇತಿ ನೀಡಿ ಹಲವರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಕಾರಣರಾಗಿದ್ದರು. ಪ್ರಸಾಧನ ತಜ್ಞರಾಗಿ, ಸಂಗ್ರಾಹಕರಾಗಿಯೂ ಯಕ್ಷಗಾನಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್​ ರಾವ್​, ಕಾರ್ಯದರ್ಶಿ ಮುರಳಿ ಕಡೆಕಾರ್​ ತಿಳಿಸಿದ್ದಾರೆ.