ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ಕಾಸರಕೋಡು ಶ್ರೀಧರ್ ಎಸ್. ಭಟ್.
* ಹಾಸ್ಯ ಚಕ್ರವರ್ತಿ ಖ್ಯಾತಿಯ ಕಲಾವಿದ
ಉಡುಪಿ: ಬಡಗುತಿಟ್ಟಿನ ಪ್ರತಿಭಾಸಂಪನ್ನ ಹಾಸ್ಯಕಲಾವಿದ, "ಹಾಸ್ಯ ಚಕ್ರವರ್ತಿ' ಖ್ಯಾತಿಯ ಕಾಸರಕೋಡು ಶ್ರೀಧರ್ ಸುಬ್ರಾಯ್ ಭಟ್ (51) ಅನಾರೋಗ್ಯದಿಂದಾಗಿ ಶುಕ್ರವಾರ (ಜು.31) ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆಯೇ ನಿಧನರಾಗಿದ್ದಾರೆ.
ಕೆರೆಮನೆ ಶಿವರಾಮ ಹೆಗಡೆ ಮತ್ತು ದೊಡ್ಡಪ್ಪ ನರಸಿಂಹ ಭಟ್ಟ ಅವರಿಂದ ಪ್ರೇರಿತರಾಗಿ 16ನೇ ವಯಸ್ಸಿನಲ್ಲೇ ಹೊನ್ನಾವರದ ಗುಣವಂತೆಯಲ್ಲಿ ಕೆರೆಮನೆ ಯಕ್ಷಗಾನ ಕೇಂದ್ರದಲ್ಲಿ ಹೆರಂಜಾಲು ವೆಂಕಟರಮಣ ಗಾಣಿಗ ಅವರಲ್ಲಿ ಯಕ್ಷಗಾನ ಕಲಿತು 18ನೇ ವಯಸ್ಸಿಗೆ ಮೇಳ ಸೇರಿ 33 ವರ್ಷಗಳ ಕಲಾಸೇವೆ ಗೈದಿರುತ್ತಾರೆ.
ಚುರುಕಿನ ಮಾತುಗಾರಿಕೆ
ಇಡಗುಂಜಿ, ಸಾಲಿಗ್ರಾಮ, ಮಂದಾರ್ತಿ, ಗುಂಡಬಾಳ ಮೇಳಗಳಲ್ಲಿ 13 ವರ್ಷಗಳ ತಿರುಗಾಟ ಮಾಡಿ ಬಳಿಕ ವಿವಿಧ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಯಾರ ಅನುಕರಣೆಯೂ ಇಲ್ಲದ ತುಂಬ ಚುರುಕಿನ ಮಾತು, ಕುಣಿತ, ಅಭಿನಯಗಳಿಂದ ಕಲಾರಸಿಕರ ಮನ ಗೆದ್ದಿದ್ದರು.
ಚಂದಗೋಪ, ರಜಕ, ನಂದಿಶೆಟ್ಟಿ, ಬೇಹಿನಚರ, ಅಜ್ಜಿ ಹೀಗೆ ಎಲ್ಲ ರೀತಿಯ ಪೌರಾಣಿಕ ಹಾಸ್ಯಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸುತ್ತಿದ್ದರು. ಮಾತುಗಾರಿಕೆಯಲ್ಲಿ ಅಸಾಧಾರಣ ಪ್ರತ್ಯುತ್ಪನ್ನ ಬುದ್ಧಿಮತ್ತೆ ಹೊಂದಿದ್ದ ಅವರು, ಚಂಡೆ ವಾದನದಲ್ಲೂ ಪರಿಣತರಾಗಿದ್ದರು ಎಂದು ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ಮಾಹಿತಿ ನೀಡಿದ್ದಾರೆ.