ಉಡುಪಿಯ ನಿಟ್ಟೂರು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ನಾರಾಯಣ ಎಂ. ಹೆಗಡೆ ಉದ್ಘಾಟಿಸಿದರು. ಮುರಳಿ ಕಡೆಕಾರ್, ನಿಶ್ವಲ್ ಕುಮಾರ್ ರಾಮದಾಸ್ ನಾಯ್ಕ್, ದೇವದಾಸ್ ಶೆಟ್ಟಿ ಇದ್ದರು.
* ನಾರಾಯಣ ಎಂ. ಹೆಗಡೆ ಅಭಿಪ್ರಾಯ
* ನಿಟ್ಟೂರು ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಬೇತಿ
ಉಡುಪಿ: ಯಕ್ಷಗಾನ ಕಲಾರಂಗವು ಯಕ್ಷನಿಧಿ, ವಿದ್ಯಾಪೋಷಕ್ ಮತ್ತು ಯಕ್ಷ ಶಿಕ್ಷಣದ ಮೂಲಕ ಕಲೆ-ಕಲಾವಿದರ ಸರ್ವತೋಮುಖ ಬೆಳವಣಿಗೆಯಲ್ಲಿ ತೊಡಗಿಕೊಂಡಿದೆ. ಯಕ್ಷಶಿಕ್ಷಣದ ಮೂಲಕ ಎಳೆಯರಲ್ಲಿ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಮೂಡಿಸುತ್ತಿದೆ. ವಿದ್ಯಾರ್ಥಿಗಳು ಈ ಕಲೆಯ ತರಬೇತಿ ಪಡೆದಲ್ಲಿ ದೈಹಿಕ, ಬೌದ್ಧಿಕ ಸಾಮರ್ಥ್ಯ ಹಾಗೂ ಪುರಾಣ ಜ್ಞಾನ ಲಭಿಸುತ್ತದೆ. ನೆನಪಿನ ಶಕ್ತಿ ವರ್ಧನೆಯೊಂದಿಗೆ ಭಾಷಾ ಶುದ್ಧಿಯೂ ಆಗುತ್ತದೆ ಎಂದು ಉಡುಪಿ ಯಕ್ಷಶಿಕ್ಷಣ ಟ್ರಸ್ಟ್ನ ಸಹಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ತಿಳಿಸಿದರು.
ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಹೆಗ್ಗುಂಜೆ ರಾಜೀವ ಶೆಟ್ಟಿ ಸಭಾಂಗಣದಲ್ಲಿ ಯಕ್ಷಗಾನ ಕಲಾರಂಗ ಮತ್ತು ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ಸಹಯೋಗದಲ್ಲಿ ಆಯೋಜಿಸಿದ್ದ ಯಕ್ಷಗಾನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಯಕ್ಷಗುರು ನಿಶ್ವಲ್ ಕುಮಾರ್ ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯ ರಾಮದಾಸ್ ನಾಯ್ಕ್ ಸ್ವಾಗತಿಸಿದರು. ಶಿಕ್ಷಕ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನಮಿತಾಶ್ರೀ ವಂದಿಸಿದರು.