ಮೂಡುಬಿದಿರೆಯಲ್ಲಿ ಯಕ್ಷಗಾನ ಗೊಂಬೆಯಾಟ ಕುರಿತ ಸಂಶೋಧನಾ ಅಧ್ಯಯನ ವರದಿ ಅನಾವರಣಗೊಳಿಸಲಾಯಿತು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಜೀವನ್ ರಾಮ್ ಸುಳ್ಯ, ಆಳ್ವಾಸ್ ಸ್ವಾಯತ್ತ ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್ ಮೊದಲಾದವರಿದ್ದರು. 
ಉಡುಪಿ

ಯಕ್ಷಗಾನ ಗೊಂಬೆ ಆಟ ಕರಾವಳಿಯ ಆಕರ್ಷಕ ಕಲೆ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಯಕ್ಷಗಾನ ಗೊಂಬೆ ಆಟವು ಕರಾವಳಿ ಭಾಗದ ಆಕರ್ಷಕ ಕಲೆಯಾಗಿದ್ದು, ಪಪೆಟ್(ಗೊಂಬೆ)ಗಳ ಮೂಲಕ ಯಕ್ಷಗಾನದ ಕಥಾವಸ್ತುಗಳನ್ನು ಪ್ರದರ್ಶಿಸುವ ಕಲಾರೂಪಕವಾಗಿದೆ. ಈ ಕಲೆ ಪ್ರೇಕ್ಷಕರಿಗೆ ಮನರಂಜನೆ ಜತೆಗೆ ಸಾಂಸ್ಕೃತಿಕ ಮೌಲ್ಯ ಪರಿಚಯಿಸುವ ಮಹತ್ವದ ಮಾಧ್ಯಮ ಎಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಜೀವನ್ ರಾಮ್ ಸುಳ್ಯ ಹೇಳಿದರು.
ಆಳ್ವಾಸ್ ಕಾಲೇಜಿನಲ್ಲಿ ಭಾರತ ಸರ್ಕಾರದ ಕರಕುಶಲ ಅಭಿವೃದ್ಧಿ ಹಾಗೂ ಜವಳಿ ಸಚಿವಾಲಯದ ಮಂಗಳೂರು ಆಯುಕ್ತರ ಕಚೇರಿಯಿಂದ ರೂಪುಗೊಂಡ ಯಕ್ಷಗಾನ ಗೊಂಬೆ ಆಟದ ಕುರಿತ ಸಂಶೋಧನಾ ಅಧ್ಯಯನ ವರದಿ ಪುಸ್ತಕ ಅನಾವರಣಗೊಳಿಸಿ ಮಾತನಾಡಿದರು.
ಆಳ್ವಾಸ್ ಸ್ವಾಯತ್ತ ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ಸರ್ಕಾರದ ಕರಕುಶಲ ಅಭಿವೃದ್ಧಿ ಹಾಗೂ ಜವಳಿ ಸಚಿವಾಲಯದ ಮಂಗಳೂರು ವಲಯದ ಸಹಾಯಕ ನಿರ್ದೇಶಕಿ ರಾಜೇಶ್ವರಿ ಕೆ.ಎಂ., ಸಹಾಯಕ ಡಿಸೈನರ್ ಅಶ್ವಿನ್ ಕುಮಾರ್, ಆಳ್ವಾಸ್ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಯೋಗೇಶ್ ಕೈರೋಡಿ ಉಪಸ್ಥಿತರಿದ್ದರು. ಸುಪ್ರಿಯಾ ಭಾರದ್ವಾಜ್ ನಿರೂಪಿಸಿದರು.

ಕಲೆಯನ್ನು ಪುನರುಜ್ಜೀವನಗೊಳಿಸಲು ಕೆಲವು ಮಹತ್ವದ ಯೋಜನೆಗಳನ್ನು ಕೇಂದ್ರ ಸರ್ಕಾರಕ್ಕೆ ಈ ವರದಿ ಶಿಫಾರಸು ಮಾಡಿದೆ. ಈ ಶಿಫಾರಸುಗಳನ್ನು ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಯಕ್ಷಗಾನ ಗೊಂಬೆ ಆಟಕ್ಕೆ ಹೊಸ ಚೈತನ್ಯ ದೊರೆಯುವ ಸಾಧ್ಯತೆ ಇದೆ.