ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.  
ಉಡುಪಿ

ಸಮಾಜಕ್ಕೆ ಮರಳಿ ಕೊಡುವುದು ಪ್ರತಿಯೊಬ್ಬರ ಜವಾಬ್ದಾರಿ: ಸೋದೆ ಶ್ರೀ

ಉಡುಪಿ: ಸಮಾಜದಿಂದ ಪಡೆದುಕೊಳ್ಳುವುದು ಮಾತ್ರವಲ್ಲದೆ, ಸಮಾಜಕ್ಕೆ ಮರಳಿ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಹಿಂದೆ ಸಂಸ್ಥೆಯಿಂದ ಮನೆ ಪಡೆದಿದ್ದ 99 ಫಲಾನುಭವಿಗಳೇ ಒಟ್ಟಾಗಿ ಸೇರಿ  100ನೇ ಮನೆಯನ್ನು ನಿರ್ಮಿಸಿಕೊಡಲು ನೆರವು ನೀಡಿರುವುದು ಸಮಾಜ ಸೇವೆ ಮತ್ತು ಕೖತಜ್ಞತೆಯ ಭಾವನೆ ಹುಟ್ಟುಹಾಕಿದೆ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಐವೈಸಿ ಸಭಾಭವನದಲ್ಲಿ ಯಕ್ಷಗಾನ ಕಲಾರಂಗ ವತಿಯಿಂದ ವಿದ್ಯಾಪೋಷಕ್‌ ವಿದ್ಯಾರ್ಥಿಗಳು ಹಾಗೂ ಯಕ್ಷಗಾನ ಕಲಾವಿದರಿಗೆ 4.98 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ 100 ಮನೆಗಳ ದಾನಿಗಳಿಗೆ ಸನ್ಮಾನ ಹಾಗೂ ಸೂರು ನೂರರ ಸಡಗರ ಕಾರ್ಯಕ್ರಮ ಉದ್ಘಾಟಿಸಿ ಅವರು ಅಶೀರ್ವಚನ ನೀಡಿದರು. 
ನಮ್ಮಲ್ಲಿ ಧರ್ಮದ ಪ್ರಜ್ಞೆ ಉಳಿದುಕೊಂಡಿದ್ದರೆ ಅದಕ್ಕೆ ಯಕ್ಷಗಾನವೇ ಪ್ರಮುಖ ಕಾರಣ. ಕಲಾವಿದರು ರಂಗಸ್ಥಳದ ಮೇಲೆ ಪಾತ್ರಧಾರಿಗಳಾಗಿ ಬಂದು ಧರ್ಮದ ಬೋಧನೆ ಮಾಡುತ್ತಾರೆ. ಆದರೆ, ಯಕ್ಷಗಾನ ಕಲಾರಂಗ ಸಂಸ್ಥೆ ಧರ್ಮವನ್ನು ಕೇವಲ ಮಾತಿನಲ್ಲಿ ಹೇಳದೆ ಕೖತಿಯಲ್ಲಿ ಆಚರಿಸಿ ತೋರಿಸಿದೆ. ಯಕ್ಷಗಾನ ಕಲಾರಂಗದ ಕಾರ್ಯಕ್ಷೇತ್ರ ಕೇವಲ ಕಲೆಗೆ ಮಾತ್ರ ಸೀಮಿತವಾಗಿಲ್ಲ. ವಿದ್ಯಾಪೋಷಕ್‌ ಯೋಜನೆಯಡಿ ರಂಗಸ್ಥಳದ ವ್ಯಾಪ್ತಿಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ವಿಸ್ತರಿಸಿಕೊಂಡಿದೆ.  ದೊಡ್ಡ ಮಟ್ಟದ ವ್ಯಾಪಕ ಕಾರ್ಯವನ್ನು ಕೈಗೊಳ್ಳಲು ಸಂಸ್ಥೆಗೆ ಸಮಾಜವೇ ಮುಖ್ಯ ಸ್ಪೂರ್ತಿಯಾಗಿದೆ ಎಂದು ಶ್ಲಾಘಿಸಿದರು. 
100 ಮನೆಗಳ ನಿರ್ಮಾಣದ ಮಹತ್ಕಾರ್ಯ
ಸಾಮಾನ್ಯ ವ್ಯಕ್ತಿಯೊಬ್ಬನಿಗೆ ಜೀವನದಲ್ಲಿ ಒಂದು ಮನೆಯನ್ನು ಕಟ್ಟುವ ಕಷ್ಟದ ಅರಿವಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸ್ವಾರ್ಥವಿಲ್ಲದೆ, ನಿಸ್ವಾರ್ಥ ಭಾವನೆಯಿಂದ ಸಮಾಜದ ಆಸರೆಗಾಗಿ ಬರೋಬ್ಬರಿ 100 ಮನೆಗಳನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಿರುವುದು ಯಕ್ಷಗಾನ ಕಲಾರಂಗ ಸಂಸ್ಥೆಗೆ ಸಲ್ಲುವ ಅತ್ಯಂತ ದೊಡ್ಡ ಕೀರ್ತಿಯಾಗಿದೆ.  ಸಂಸ್ಥೆಯು ಸಮಾಜದಲ್ಲಿ ಕೇವಲ ಧರ್ಮದ ಬೋಧನೆ ಮಾಡುವುದಷ್ಟೇ ಅಲ್ಲದೆ, ಧರ್ಮವನ್ನು ಪ್ರಾಯೋಗಿಕವಾಗಿ ಹೇಗೆ ಆಚರಿಸಬೇಕು ಎಂಬುದನ್ನು ತೋರಿಸಿಕೊಟ್ಟಿದೆ ಎಂದರು. 
ಮಾಹೆಯ ಸಹಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕರ್ಣಾಟಕ ಬ್ಯಾಂಕ್‌ನ ಎಂ.ಡಿ ಮತ್ತು ಸಿಇಓ ಎಂ. ರಾಘವೇಂದ್ರ ಭಟ್‌ ಸೂರು ನೂರರ ಸಂಪುಟ ಬಿಡುಗಡೆ ಮಾಡಿದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕಲಾರಂಗ ಮಾಜಿ ಅಧ್ಯಕ್ಷ ಗಣೇಶ್‌ ರಾವ್‌, ಕೋಟ ಗೀತಾನಂದ ಫೌಂಡೇಶನ್‌ ಮುಖ್ಯಸ್ಥ ಆನಂದ ಸಿ. ಕುಂದರ್‌, ಶಾಸಕರಾದ ಯಶ್‌ಪಾಲ್‌ ಎ. ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಕಿರಣ್‌ ಕುಮಾರ್‌ ಕೊಡ್ಗಿ ಹಾಗೂ ಗುರುರಾಜ ಗಂಟಿಹೊಳೆ ಅಭ್ಯಾಗತರಾಗಿದ್ದರು.
 
ಸಂಸ್ಥೆ ಅಧ್ಯಕ್ಷ ಗಂಗಾಧರ ರಾವ್‌ ಸ್ವಾಗತಿಸಿದರು.  ಕಲಾರಂಗ ಕಾರ್ಯದರ್ಶಿ ಮುರಳಿ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ನೂರು ಮನೆಗಳ ಪ್ರಾಯೋಜಕರನ್ನು ಮತ್ತು ಮನೆ ನಿರ್ಮಾಣಕ್ಕೆ ಸಹಕರಿಸಿದ ಕಾರ್ಮಿಕರನ್ನು ಗೌರವಿಸಲಾಯಿತು.  ಜೊತೆ ಕಾರ್ಯದರ್ಶಿ ನಾರಾಯಣ ಹೆಗಡೆ ವಂದಿಸಿದರು.