ಎಂ. ಗಂಗಾಧರ ರಾವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉಡುಪಿ: ಯಕ್ಷಗಾನ ಕಲಾರಂಗ ವತಿಯಿಂದ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ 90 ಮನೆ, ಕಲಾವಿದರಿಗೆ 10 ಮನೆ ನಿರ್ಮಿಸಲಾಗಿದ್ದು, 100ನೇ ಮನೆಯ ಉದ್ಘಾಟನೆಯನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದಿಂದ ಸೂರು ನೂರರ ಸಡಗರ ಕಾರ್ಯಕ್ರಮವನ್ನು ಜೂ. 28ರಂದು ಮಧ್ಯಾಹ್ನ 2 ಗಂಟೆಗೆ ಸಂಸ್ಥೆಯ ಐವೈಸಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಕಲಾರಂಗ ಕಾರ್ಯದರ್ಶಿ ಮುರಳಿ ಕಡೆಕಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಕರ್ಣಾಟಕ ಬ್ಯಾಂಕ್ನ ಎಂ.ಡಿ ಮತ್ತು ಸಿಇಓ ಎಂ. ರಾಘವೇಂದ್ರ ಭಟ್ ಸೂರು ನೂರರ ಸಂಪುಟ ಬಿಡುಗಡೆ ಮಾಡಲಿದ್ದಾರೆ. ಕೋಟ ಗೀತಾನಂದ ಫೌಂಡೇಶನ್ ಮುಖ್ಯಸ್ಥ ಆನಂದ ಸಿ. ಕುಂದರ್ ಶುಭಾಶಂಸನೆಗೈಯಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಶಾಸಕರಾದ ಸುನಿಲ್ ಕುಮಾರ್, ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರುರಾಜ ಗಂಟಿಹೊಳೆ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನೂರು ಮನೆಗಳ ಪ್ರಾಯೋಜಕರನ್ನು ಮತ್ತು ಮನೆ ನಿಮಾರ್ಣಕ್ಕೆ ಸಹಕರಿಸಿದ ಕಾರ್ಮಿಕರನ್ನು ನೆರವು ನೀಡಿದ ಮಹನೀಯರನ್ನು ಗೌರವಿಸಲಾಗುವುದು. ಎಲ್ಲ ಫಲಾನುಭವಿಗಳಿಗೆ ಒಂದೊಂದು ಕಸಿ ಮಾವಿನ ಗಿಡ ವಿತರಿಸಲಾಗುವುದು ಎಂದರು.
ಕಲಾರಂಗ ಕಳೆದ 22 ವರ್ಷಗಳಿಂದ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್ ಮೂಲಕ ಆರ್ಥಿಕ ನೆರವಿನೊಂದಿಗೆ ಸರ್ವರೀತಿಯ ಸಹಾಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ 2012ರಲ್ಲಿ ತೀರಾ ದುಸ್ಥಿತಿಯಲ್ಲಿರುವ ಕಲಾವಿದ ಭೋಜ ಮರಕಾಲರ ಮಗಳು ವಿದ್ಯಾಪೋಷಕ್ ಫಲಾನುಭವಿ ಪಲ್ಲವಿಗೆ ಮೊದಲ ಮನೆಯನ್ನು ನಿರ್ಮಿಸಿಕೊಡಲಾಯಿತು. ಅನಂತರ ದಾನಿಗಳ ಸಹಕಾರದಿಂದ ನಿರಂತರವಾಗಿ ಬಡ ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಸ್ಥೆ ಕೋಶಾಧಿಕಾರಿ ಸದಾಶಿವ ರಾವ್, ಉಪಾಧ್ಯಕ್ಷ ಎಸ್.ವಿ. ಭಟ್, ಜೊತೆ ಕಾರ್ಯದರ್ಶಿ ನಾರಾಯಣ ಹೆಗಡೆ, ವಿದ್ಯಾ ಪ್ರಸಾದ್ ಉಪಸ್ಥಿತರಿದ್ದರು.
"
ಜೂನ್ 28ರಂದು ಬೆಳಗ್ಗೆ 9.30ಕ್ಕೆ ಹೆಬ್ರಿ ತಾಲೂಕಿನ ಶಿವಪುರದ ಕಲ್ಮುಂಡದಲ್ಲಿ ವಿದ್ಯಾಪೋಷಕ್ ವಿದ್ಯಾರ್ಥಿನಿ ಸಿಂಚನಾ ಅವರಿಗೆ 100 ಮನೆಗಳ ಲಾನುಭವಿಗಳ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ 100ನೇ ಮನೆ ಶತಸ್ಮ$ತಿ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಶೀರೂರು ಮಠದ ದಿವಾನ್ ಡಾ. ಉದಯ್ ಸರಳತ್ತಾಯ ಉದ್ಘಾಟಿಸಲಿದ್ದಾರೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ, ಉದ್ಯಮಿ ಹರೀಶ್ ರಾಯಸ್, ಸದಾಶಿವ ಭಟ್, ವಿಲಾಸಿನಿ ಬಾಬುರಾಯ ಶೆಣೈ, ಶ್ರೀನಿವಾಸ ಹೆಬ್ಬಾರ್ ಭಾರ್ಗವಿ ಐತಾಳ್ ಮೊದಲಾದವರು ಭಾಗವಹಿಸಲಿದ್ದಾರೆ
— ಎಂ. ಗಂಗಾಧರ ರಾವ್, ಸಂಸ್ಥೆಯ ಅಧ್ಯಕ್ಷ