ಹಿರಿಯ ವಿದ್ವಾಂಸ ಡಾ. ಚಂದ್ರಶೇಖರ ದಾಮ್ಲೆ ಅವರಿಗೆ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಧರ್ಮಕರ್ತೃ ಡಾ. ಜಿ. ಭೀಮೇಶ್ವರ ಜೋಶಿ ಪ್ರದಾನ ಮಾಡಿದರು.
ಉಡುಪಿ: ಯಕ್ಷಗಾನದ ಗುಣ, ಗೌರವ ಕಾಪಾಡುವ ರೀತಿಯಲ್ಲಿ ಕಲಾವಿದರು ಪಾತ್ರಗಳನ್ನು ನಿರ್ವಹಿಸಬೇಕು, ಇದಕ್ಕಾಗಿ ಹೆಚ್ಚಿನ ಅಧ್ಯಯನ ಕೈಗೊಳ್ಳಬೇಕು. ಪಾತ್ರಗಳ ವಿಶೇಷತೆಗಳನ್ನು ಅರಿತುಕೊಳ್ಳಬೇಕು. ಚಪ್ಪಾಳೆಗೋಸ್ಕರ ಯಕ್ಷಗಾನದ ಪಾವಿತ್ರ್ಯಕ್ಕೆ ಹಾಗೂ ಪಾರಂಪರಿಕ ಶೈಲಿಗೆ ಅಪಚಾರವಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಧರ್ಮಕರ್ತೃ ಡಾ. ಜಿ. ಭೀಮೇಶ್ವರ ಜೋಶಿ ಹೇಳಿದರು.
ಐವೈಸಿ ಸಭಾಭವನದಲ್ಲಿ ನಡೆದ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನರನ್ನು ಮೆಚ್ಚಿಸುವ ಬದಲು ಪಾತ್ರಕ್ಕೆ ಪರಿಪೂರ್ಣತೆ ತರುವಲ್ಲಿ ಕಲಾವಿದರು ಗಮನಹರಿಸಬೇಕು. ಅಭಿನಯ, ನೃತ್ಯ, ಮಾತುಗಾರಿಕೆಯಲ್ಲಿ ಸೃಜನಶೀಲತೆ ಮುಖ್ಯವಾಗಿದ್ದು, ಪೌರಾಣಿಕ ಪಾತ್ರಗಳನ್ನು ಸಮಾಜ ಸ್ವೀಕರಿಸುತ್ತದೆ ಎಂಬ ಅರಿವು ಅಗತ್ಯ ಎಂದರು.
ಹಿರಿಯ ವಿದ್ವಾಂಸ ಡಾ. ಚಂದ್ರಶೇಖರ ದಾಮ್ಲೆ ಅವರಿಗೆ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ರಾಂತ ಕುಲಪತಿ ಡಾ. ಬಿ. ಎ. ವಿವೇಕ ರೈ ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ, ಯಕ್ಷ ಗುರು ಪವನ್ ಕಿರಣ್ಕೆರೆ, ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಹೆಗಡೆ ವಂದಿಸಿದರು.