ಉಡುಪಿ ಕೊಡವೂರಿನಲ್ಲಿ ಆಯೋಜಿಸಿದ್ದ ಯಕ್ಷಗಾನ ಕಲಿಕಾ ಶಿಬಿರ ಉದ್ಘಾಟಿಸಿ ಪ್ರೊ. ಎಂ.ಎಲ್​. ಸಾಮಗ ಮಾತನಾಡಿದರು. ಶೈಲೇಶ ತೀರ್ಥಹಳ್ಳಿ, ಪ್ರಕಾಶ ಜಿ. ಕೊಡವೂರು, ಎಂ.ಎಸ್​. ಭಟ್​, ಭಾಸ್ಕರ ಪಾಲನ್​, ಅಕ್ಷತ ಅಮೀನ್​, ಚಂದ್ರಕಾಂತ ಕುಂದರ್​ ಇದ್ದರು. 
ಉಡುಪಿ

ಯಕ್ಷಗಾನದಿಂದ ಶರೀರ, ಬುದ್ಧಿಗೆ ಉತ್ತಮ ಕಸರತ್ತು

* ಪ್ರೊ. ಎಂ.ಎಲ್​. ಸಾಮಗ ಅಭಿಪ್ರಾಯ

* ಯಕ್ಷ ಹೆಜ್ಜೆ ಕಲಿಕಾ ಶಿಬಿರ ಉದ್ಘಾಟನೆ

ಉಡುಪಿ: ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಇಂದು ಜಗತ್ತಿನಾದ್ಯಂತ ಪ್ರೇಕ್ಷಕರಿದ್ದು ವಿದೇಶಗಳಲ್ಲೂ ಅವಕಾಶ ಸಿಗಲಿದೆ. ಭವಿಷ್ಯಕ್ಕೂ ಒಳ್ಳೆಯದಾಗಲಿದೆ. ಪುರಾಣ ಜ್ಞಾನದೊಂದಿಗೆ ಸ್ಪಷ್ಟವಾಗಿ ಮತ್ತು ಚಂದವಾಗಿ ಕನ್ನಡ ಮಾತನಾಡಲು ಸಾಧ್ಯವಾಗಲಿದೆ. ಇಂತಹ ಅದ್ಭುತ ಕಲೆ ಜಗತ್ತಿನಲ್ಲಿ ಎಲ್ಲೂ ಇಲ್ಲ. ಇದರಿಂದ ಶರೀರ ಮತ್ತು ಬುದ್ಧಿಗೆ ಉತ್ತಮ ಕಸರತ್ತು ಸಿಗಲಿದೆ ಎಂದು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್​. ಸಾಮಗ ಅಭಿಪ್ರಾಯಪಟ್ಟರು.

ಉಡುಪಿ ಕೊಡವೂರಿನ ವಿಪ್ರಶ್ರೀ ಕಲಾಭವನದಲ್ಲಿ ಸುಮನಸಾ ಕೊಡವೂರು ಸಂಸ್ಥೆಯ ರಜತ ಸಂಭ್ರಮದ ಸರಣಿ ಕಾರ್ಯಕ್ರಮದ ನಿಮಿತ್ತ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಯಕ್ಷರಂಗದ ಸವ್ಯಸಾಚಿ ದಿ. ಜಯಂತಕುಮಾರ ತೋನ್ಸೆ ಸ್ಮರಣಾರ್ಥ ಆಯೋಜಿಸಿದ್ದ 'ಯಕ್ಷಪಥ ಚಿಣ್ಣರ ಯಕ್ಷ ಹೆಜ್ಜೆ' ಕಲಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಾನಸಿಕ ಆರೋಗ್ಯ ವೃದ್ಧಿ

ನೃತ್ಯ, ವೇಷಭೂಷಣ, ಗಾಯನ ಹಾಗೂ ಮಾತುಗಾರಿಕೆಯ ಅಪೂರ್ವ ಸಂಗಮವಿರುವ ವಿಶಿಷ್ಟ ಕಲೆಯಿದು. ವಿದ್ಯಾರ್ಥಿಗಳು ಆಸಕ್ತಿಯಿಂದ ಇದನ್ನು ಕಲಿಯಬೇಕು. ಕೇವಲ ಒಂದು ಪ್ರದರ್ಶನ ನೀಡಿ, ಫೋಟೋ ಮಾಡಿಟ್ಟುಕೊಂಡು ಕಲಿಕೆ ನಿಲ್ಲಿಸಬಾರದು. ಮಾನಸಿಕ ಆರೋಗ್ಯ ವೃದ್ಧಿಗೂ ಇದು ಸಹಕಾರಿ ಎಂದರು.

ಶಿಬಿರದ ಗುರುಗಳಾದ ಶೈಲೇಶ ತೀರ್ಥಹಳ್ಳಿ, ಸಂಸ್ಥೆಯ ಅಧ್ಯಕ್ಷ ಪ್ರಕಾಶ ಜಿ. ಕೊಡವೂರು, ಗೌರವಾಧ್ಯಕ್ಷ ಎಂ.ಎಸ್​. ಭಟ್​, ಸಂಚಾಲಕ ಭಾಸ್ಕರ ಪಾಲನ್​, ಶಿಬಿರದ ಸಂಯೋಜಕ ಅಕ್ಷತ ಅಮೀನ್​, ಕಾರ್ಯದರ್ಶಿ ಚಂದ್ರಕಾಂತ ಕುಂದರ್​ ಉಪಸ್ಥಿತರಿದ್ದರು.