ಉಡುಪಿ ರಾಜಾಂಗಣದಲ್ಲಿ ಕಿಶೋರ ಯಕ್ಷಗಾನ ಸಮಾರೋಪ ಸಮಾರಂಭದಲ್ಲಿ ಸುಗುಣೇಂದ್ರ ಶ್ರೀಗಳು ಉಡುಪಿ ವಿದ್ಯೋದಯ ಪಬ್ಲಿಕ್​ ಸ್ಕೂಲ್​ನ ಅಧ್ಯಾಪಕಿ ಸುಧಾ ಹೆಬ್ಬಾರ್​ ಅವರಿಗೆ ಶಾಲೆಯ ಮಕ್ಕಳ ಪ್ರಮಾಣಪತ್ರ ವಿತರಿಸಿದರು. ಸುಶ್ರೀಂದ್ರ ಶ್ರೀ, ಡಾ. ಎಂ.ಪ್ರಭಾಕರ ಜೋಶಿ, ಡಾ. ತಲ್ಲೂರು ಶಿವರಾಂ ಶೆಟ್ಟಿ, ಯು. ವಿಶ್ವನಾಥ ಶೆಣೈ, ಎಂ.ಗಂಗಾಧರ್​ ರಾವ್​ ಇದ್ದರು. 
ಉಡುಪಿ

ಕಲಾ ಪ್ರಪಂಚಕ್ಕೆ ಯಕ್ಷ ಶಿಕ್ಷಣ ಅಪೂರ್ವ ಮಾದರಿ

* ವಿಮರ್ಶಕ ಡಾ. ಎಂ.ಪ್ರಭಾಕರ ಜೋಶಿ ಅಭಿಪ್ರಾಯ

* ರಾಜಾಂಗಣದಲ್ಲಿ ಕಿಶೋರ ಯಕ್ಷಗಾನ ಸಮಾರೋಪ

ಉಡುಪಿ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿ ಅವರಿಂದಲೇ ಪ್ರದರ್ಶನ ಏರ್ಪಡಿಸುವ ವ್ಯವಸ್ಥೆಯನ್ನು ಉಡುಪಿಯ 'ಯಕ್ಷ ಶಿಕ್ಷಣ ಟ್ರಸ್ಟ್​' 18 ವರ್ಷದಿಂದ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಈ ಬಾರಿ ಜಿಲ್ಲೆಯ 94 ಶಾಲೆಗಳ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 41 ಯಕ್ಷಗುರುಗಳು ಮಹಾ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ. ಕಲಾ ಪ್ರಪಂಚಕ್ಕೆ ಯಕ್ಷಶಿಕ್ಷಣವು ಅಪೂರ್ವ ಮಾದರಿಯಾಗಿದೆ ಎಂದು ಖ್ಯಾತ ಕಲಾವಿದ, ವಿಮರ್ಶಕ ಡಾ. ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ 17 ದಿನಗಳ ಕಾಲ ನಡೆದ ಕಿಶೋರ ಯಕ್ಷಗಾನ ಸಂಭ್ರಮ-2025ರ ಕಾರ್ಯಕ್ರಮದ ನಿಮಿತ್ತ ಗುರುವಾರ ರಾತ್ರಿ (ಡಿ.18) ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳಿಗೆ ಲಭಿಸಿದ ಭಾಗ್ಯ

ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಶ್ರೀಕೃಷ್ಣನ ಸನ್ನಿಧಿಯಲ್ಲಿ ಗೆಜ್ಜೆ ಕಟ್ಟಿ ಕುಣಿಯುವ ವಿಶೇಷ ಅವಕಾಶ ಬಾಲಕಲಾವಿದರಿಗೆ ಒಲಿದಿದೆ. ಇದು ಅವರ ಭಾಗ್ಯವಾಗಿದೆ. ಉಡುಪಿಯ ಎಲ್ಲ ಅಷ್ಟ ಮಠಗಳೂ ಸಹ ನಿರಂತರವಾಗಿ ಕಲೆಯ ಪೋಷಣೆ ಮಾಡುತ್ತಲೇ ಬಂದಿದೆ. ಶಾಲಾ ಮಕ್ಕಳಿಗೆ ಯಕ್ಷಗಾನ ಕಲೆಯ ತರಬೇತಿ ನೀಡುತ್ತಿರುವುದು ವಿಶೇಷ ಕಾರ್ಯವಾಗಿದೆ ಎಂದರು.

ರಾಜ್ಯಕ್ಕೆ ಹೆಮ್ಮೆ

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಮಾತನಾಡಿ, 18 ವರ್ಷದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿ, ಅವರಿಂದಲೇ ಪ್ರದರ್ಶನ ಏರ್ಪಡಿಸುತ್ತಿರುವ ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್​ ನಮ್ಮ ರಾಜ್ಯಕ್ಕೆ ಹೆಮ್ಮೆಯಾಗಿದೆ. ಈ ಕಲೆಯ ಕಲಿಕೆಯಿಂದ ಮಕ್ಕಳಲು ಸುಸಂಸ್ಕೃತರಾಗುತ್ತಾರೆ. ಅವರಲ್ಲಿ ವ್ಯಕ್ತಿತ್ವ ವಿಕಸನವಾಗಲಿದೆ. ಸಭಾಕಂಪವಿಲ್ಲದೆ ನಿರರ್ಗಳವಾಗಿ ಮಾತನಾಡಲೂ ಅವರಿಗೆ ಸಾಧ್ಯವಾಗಲಿದೆ ಎಂದರು.
ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಹಿರಿಯ ದಾನಿ ಯು. ವಿಶ್ವನಾಥ ಶೆಣೈ ಉಪಸ್ಥಿತದ್ದರು. ಪ್ರದರ್ಶನ ನೀಡಿದ ಶಾಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ವಿದ್ಯಾರ್ಥಿಗಳಾದ ಕೃತಿ, ಸಮರ್ಥ, ಅಮೋಘ, ಪ್ರಾರ್ಥನಾ, ಸಾನ್ವಿ ಬಲ್ಲಾಳ, ದಿಷಿತಾ, ಬಿಂದು, ಮಣಿಕಂಠ, ಅವನಿ ಪಡುಕೋಣೆ, ಹರ್ಷಿತಾ, ಮನೋಜ್​, ಅಮೃತಾ ಇತರರು ತಮ್ಮ ಅನುಭವ ಹಂಚಿಕೊಂಡರು.
ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಜಿ. ಶೆಟ್ಟಿ, ಯು.ಎಸ್​. ರಾಜಗೋಪಾಲ ಆಚಾರ್ಯ, ನಿರಂಜನ ಭಟ್​, ಗಣೇಶ್​ ಬ್ರಹ್ಮಾವರ, ಕೆ. ಸದಾಶಿವ ರಾವ್​, ನಾಗರಾಜ ಹೆಗಡೆ, ಗಣಪತಿ ಭಟ್​, ಕೆ.ಅಜಿತ್​ ಕುಮಾರ್​, ಎಚ್​.ಎನ್​. ವೆಂಕಟೇಶ, ಕೆ.ಆನಂದ್​ ಶೆಟ್ಟಿ, ಡಾ. ರಾಘವೇಂದ್ರ ರಾವ್​, ಡಾ. ಪ್ರತಿಮಾ, ಮಂಜುನಾಥ ಪಾಲ್ಗೊಂಡಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್​ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್​ ಪ್ರಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು 'ಶಶಿಪ್ರಭಾ ಪರಿಣಯ' ಯಕ್ಷಗಾನ ಪ್ರದರ್ಶಿಸಿದರು.
"

ಶಾಲಾ ಮಕ್ಕಳಿಗೆ ಯಕ್ಷಗಾನ ಕಲಿಸಿ ಅದನ್ನು ಸಂಯೋಜಿಸುವುದು ಸಣ್ಣ ಸಾಹಸವಲ್ಲ. ಅದನ್ನು ಉಡುಪಿ ಯಕ್ಷಗಾನ ಕಲಾರಂಗದ ನಾಯಕತ್ವ, ಕಾರ್ಯಕರ್ತರ ತಂಡವು ಸಾಧಿಸಿ ತೋರಿಸಿದೆ. ಯಕ್ಷಗಾನ ಕಲೆಯ ಸಂವರ್ಧನೆ, ಪ್ರಸಾರ, ವಿಸ್ತರಣೆ ಕಾರ್ಯವು ಕಿಶೋರ ಯಕ್ಷಗಾನದಿಂದ ಸಾಧ್ಯವಾಗಿದೆ.

"

ಶಿಕ್ಷಣ, ಧರ್ಮ, ಕಲೆ, ಸೇವೆಗೆ ಉಡುಪಿ ಪ್ರಖ್ಯಾತಿ ಪಡೆದಿದೆ. ಈ ಯಕ್ಷಶಿಕ್ಷಣದ ಮೂಲಕ ಯಕ್ಷಗಾನ ಕಲಾರಂಗ ಈ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೇರಿಸಿದೆ. ಶ್ರೀಕೃಷ್ಣನ ಗೀತಾ ಸಂದೇಶದoತೆ ಸಮಾಜ, ಕಲಾಸೇವೆಗೈದ ಯಕ್ಷಗಾನ ಕಲಾರಂಗಕ್ಕೆ ಇಂತಹದೊoದು ಮಾದರಿ ಸೇವೆ ನಡೆಸಲು ಸಾಧ್ಯವಾಗಿದೆ ಎಂದು ನಾವು ಭಾವಿಸಿದ್ದೇವೆ. ಯಕ್ಷಗಾನ ಕಲಾರಂಗ ಇನ್ನಷ್ಟು ಬೆಳೆಯಲಿ.