ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಅವರನ್ನು ಸನ್ಮಾನಿಸಲಾಯಿತು. ಕರ್ಣಾಟಕ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಷರ್ ರಾಘವೇಂದ್ರ ಎಸ್.ಭಟ್, ಉಡುಪಿ ಎಲ್‌ಐಸಿ ಡಿವಿಜನ್ ಸೀನಿಯರ್ ಮ್ಯಾನೇಜರ್ ಗಣಪತಿ ಎನ್.ಭಟ್ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಯಕ್ಷಗಾನ ತಾಳಮದ್ದಳೆ ಜನರಲ್ಲಿ ಪುರಾಣ ಕಥೆಗಳ ಮೂಲಕವಾಗಿ ಸತ್‌ಚಿಂತನೆಯನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದೆ. ತಾಳಮದ್ದಳೆ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಮ್ಯಾನೇಜಿಂಗ್ ಡೈರೆಕ್ಷರ್ ರಾಘವೇಂದ್ರ ಎಸ್.ಭಟ್ ಹೇಳಿದರು.
ಕಿನ್ನಿಗೋಳಿಯ ಯಕ್ಷಲಹರಿ ಕಿನ್ನಿಗೋಳಿ ಮತ್ತು ಯುಗ ಪುರುಷದ ಆಶ್ರಯದಲ್ಲಿ ಯಕ್ಷಲಹರಿಯ 36ನೇ ವರ್ಷದ ಸಂಭ್ರಮ-2026 ಪ್ರಯುಕ್ತ ಕರ್ಣಾಟಕ ಬ್ಯಾಂಕ್ ಯಕ್ಷಗಾನ ತಾಳಮದ್ದಳೆ ಸಪ್ತಾಹ ’ಬಲಂ ಭೀಮಾಭಿರಕ್ಷಿತಂ’ ಹಾಗೂ 36ನೇ ವಾರ್ಷಿಕೋತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಬರೂರು ವೇದವ್ಯಾಸ ತಂತ್ರಿ ಶುಭಾಶಂಶನೆಗೈದರು. ಉದ್ಯಮಿ ಕೆ.ಶ್ರೀಪತಿ ಭಟ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಪತ್ರಕರ್ತ ಲೀಲಾಕ್ಷ ಕರ್ಕೇರ, ಅಗರಿ ಸಮೂಹ ಸಂಸ್ಥೆಗಳ ಮಾಲೀಕ ಅಗರಿ ರಾಘವೇಂದ್ರ ರಾವ್, ಉಳೆಪಾಡಿ ಕ್ಷೇತ್ರದ ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್, ಸುರತ್ಕಲ್ ಓರಿಯಂಟಲ್ ಇನ್ಶೂರೆನ್ಸ್ ಕಂಪನಿಯ ಶಾಖಾ ಪ್ರಬಂಧಕ ಯಾದವ ದೇವಾಡಿಗ, ಕಿನ್ನಿಗೋಳಿಯ ವೈದ್ಯ ಪ್ರಕಾಶ್ ನಂಬಿಯಾರ್, ಉದ್ಯಮಿ ನಾಗಾರಾಜ ಆಚಾರ್ಯ, ಸುಧಾಕರ ಕುಲಾಲ್, ದಿನಕರ ಮೇಂಡ, ರಂಜಿತ್ ಆಚಾರ್ಯ, ಭವಿಷ್ ಶೆಟ್ಟಿ ಮತ್ತಿತರಿದ್ದರು. ಯಕ್ಷಲಹರಿಯ ಅಧ್ಯಕ್ಷ ರಘುನಾಥ್ ಕಾಮತ್ ಕೆಂಚನಕೆರೆ ಸ್ವಾಗತಿಸಿದರು.
ಯುಗಪುರುಷದ ಭುವನಾಭಿರಾಮ ಪ್ರಸ್ತಾವನೆಗೈದರು, ಶ್ರೀವತ್ಸ ಎಸ್.ಆರ್ ಸನ್ಮಾನ ಪತ್ರ ವಾಚಿಸಿದರು. ಉಮೇಶ್ ನೀಲಾವರ ವಿದ್ಯಾರ್ಥಿವೇತನದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ವಸಂತ ದೇವಾಡಿಗ ಹಾಗೂ ವಿನಯ ಆಚಾರ್ ನಿರೂಪಿಸಿದರು. ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ ವಂದಿಸಿದರು. ಗದಾಯುದ್ದ ತಾಳಮದ್ದಳೆ ನಡೆಯಿತು.
ಗೌರವಾರ್ಪಣೆ, ವಿದ್ಯಾರ್ಥಿವೇತನ
ಕಲಾ ಪೋಷಕರ ನೆಲೆಯಲ್ಲಿ ಕೆ.ಧರ್ಮರಾಜ ಕಂಬಳಿ, ಕಸಾಪ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಸಿಇಟಿಯಲ್ಲಿ ರ‌್ಯಾಂಕ್ ಪಡೆದ ಮಾಧವ ಕಾಮತ್ ಕೆಂಚನಕೆರೆ ಅವರನ್ನು ಗೌರವಿಸಲಾಯಿತು. 30ಕ್ಕೂ ಹೆಚ್ಚು ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.