ಮಣಿಪಾಲದ ಮಾಹೆಯಲ್ಲಿ ಯಕ್ಷಗಾನ ಕಲಾವಿದರಿಗೆ ಡಾ. ಎಚ್​.ಎಸ್​. ಬಲ್ಲಾಳ್​ ಅವರು 'ಮಣಿಪಾಲ ಆರೋಗ್ಯ ಕಾರ್ಡ್​ ವಿತರಿಸಿದರು. ಕಿಶನ್​ ಹೆಗ್ಡೆ ಪಳ್ಳಿ, ಡಾ.ನಾರಾಯಣ ಸಭಾಹಿತ, ಡಾ.ಅವಿನಾಶ್​ ಶೆಟ್ಟಿ, ಡಾ. ಸುಧಾಕರ್​ ಕಂಟಿಪುಡಿ ಇತರರಿದ್ದರು. 
ಉಡುಪಿ

ಯಕ್ಷಗಾನ ಕಲಾವಿದರು ಸಾಂಸ್ಕೃತಿಕ ಪರಂಪರೆಯ ರಕ್ಷಕರು

* ಮಾಹೆ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಅನಿಸಿಕೆ

* 'ಮಣಿಪಾಲ ಆರೋಗ್ಯ ಕಾರ್ಡ್​' ವಿತರಣೆ

ಉಡುಪಿ: ಯಕ್ಷಗಾನ ಕಲಾವಿದರು ನಮ್ಮ ಸಾಂಸ್ಕೃತಿಕ ಪರಂಪರೆಯ ರಕ್ಷಕರು. ಅವರಿಗೆ ಸಮಯೋಚಿತ ಹಾಗೂ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗುವುದು ಅತ್ಯಂತ ಅಗತ್ಯ. 'ಮಣಿಪಾಲ ಆರೋಗ್ಯ ಕಾರ್ಡ್​' ಮೂಲಕ ಕಲಾವಿದರು ಹಾಗೂ ಅವರ ಕುಟುಂಬಗಳಿಗೆ ವೈದ್ಯಕೀಯ ವೆಚ್ಚದ ಭಾರ ಕಡಿಮೆ ಮಾಡಲು ಮಾಹೆ ನೆರವಾಗುತ್ತಿದೆ. ಅವರನ್ನು ಗುರುತಿಸಿ ಬೆಂಬಲಿಸುವಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್​ನ ಪ್ರಯತ್ನ ಮಾದರಿಯಾಗಿದೆ ಎಂದು ಮಾಹೆ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಶ್ಲಾಘಿಸಿದರು.
ಮಣಿಪಾಲದ ಮಾಹೆ ವಿವಿಯಲ್ಲಿ ಕುಲಾಧಿಪತಿ ಡಾ.ರಾಮದಾಸ್​ ಪೈ ಅವರ 90ನೇ ವರ್ಷದ ಜನ್ಮದಿನದ ನಿಮಿತ್ತ ಯಕ್ಷಧ್ರುವ ಪಟ್ಲ ಫೌಂಡೇಷನ್​ ಟ್ರಸ್ಟ್​ ಮಂಗಳೂರು ಸಹಕಾರದಲ್ಲಿ ತೆಂಕು-ಬಡಗುತಿಟ್ಟು ವೃತ್ತಿ ಮೇಳಗಳ ಯಕ್ಷಗಾನ ಕಲಾವಿದರಿಗೆ ಶನಿವಾರ (ಜ.3) ಉಚಿತವಾಗಿ ಮಣಿಪಾಲ ಆರೋಗ್ಯ ಕಾರ್ಡ್​ ಸೌಲಭ್ಯ ವಿತರಿಸಿ ಮಾತನಾಡಿದರು.

ಕಲಾವಿದರ ಕುಟಂಬಕ್ಕೂ ನೆಮ್ಮದಿ

ಪಂಚ ಮೇಳಗಳ ಯಜಮಾನ ಕಿಶನ್​ ಹೆಗ್ಡೆ ಪಳ್ಳಿ ಮಾತನಾಡಿ, ಈ ಆರೋಗ್ಯ ಕಾರ್ಡ್​ನಿಂದ ಕಲಾವಿದರಿಗೆ ಹಾಗೂ ಕುಟುಂಬಗಳಿಗೆ ಭಾರಿ ನೆಮ್ಮದಿ ನೀಡಲಿದೆ. ಅನಾರೋಗ್ಯದ ಸಂದರ್ಭದಲ್ಲಿ ಹೆಚ್ಚಿನ ವೆಚ್ಚದ ಭಯವಿಲ್ಲದೆ ವೈದ್ಯಕೀಯ ಚಿಕಿತ್ಸೆ ಪಡೆಯಬಹುದೆಂಬ ವಿಶ್ವಾಸ ನೀಡುತ್ತದೆ. ಋತುಕಾಲೀನ ಯಕ್ಷಗಾನ ಪ್ರದರ್ಶನಗಳನ್ನೇ ಅವಲಂಬಿತ ಆಗಿರುವ ಕಲಾವಿದರಿಗೆ ಇದು ದೊಡ್ಡ ಸಹಾಯವಾಗಿದೆ ಎಂದರು.
ತೆಂಕು ಮತ್ತು ಬಡಗು ತಿಟ್ಟಿನ ಒಟ್ಟು 37 ಮೇಳಗಳ 810 ಕಲಾವಿದರು ಮತ್ತು ಅವರ ಕುಟುಂಬದ 2,350 ಸದಸ್ಯರು 'ಮಣಿಪಾಲ ಆರೋಗ್ಯ ಕಾರ್ಡ್​' ಸೌಲಭ್ಯ ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಮಾಹೆ ಸಹ ಕುಲಪತಿ ಡಾ.ನಾರಾಯಣ ಸಭಾಹಿತ, ಕಸ್ತೂರ್ಬಾ ಆಸ್ಪತ್ರೆಯ ಮುಖ್ಯಸ್ಥ ಡಾ.ಅವಿನಾಶ್​ ಶೆಟ್ಟಿ, ಡಾ. ಸುಧಾಕರ್​ ಕಂಟಿಪುಡಿ, ವಿವಿಧ ಮೇಳಗಳ ಯಜಮಾನರು, ಪ್ರತಿನಿಧಿಗಳು ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಷನ್​ನ ಕಾರ್ಯಕರ್ತರು ಉಪಸ್ಥಿತರಿದ್ದರು. 
"

ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿ ಮತ್ತು ಯಕ್ಷಗಾನ ಪರಂಪರೆಯ ಸಂರಕ್ಷಣೆ ಮತ್ತು ವಿಸ್ತರಣೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್​ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಟ್ರಸ್ಟ್​ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್​ ಶೆಟ್ಟಿ ಅವರ ಮನವಿಗೆ ಸ್ಪಂದಿಸಿ, ಸಮುದಾಯ ಆರೋಗ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ನಿರಂತರ ಬದ್ಧತೆಯ ಭಾಗವಾಗಿ ಆರೋಗ್ಯ ಕಾರ್ಡ್​ ನೀಡಲಾಗುತ್ತಿದೆ.