‘ಕೊಂಡದಕುಳಿ ರಾಮ ಹೆಗಡೆ’ ಪ್ರಶಸ್ತಿ ಮತ್ತು ‘ಉತ್ತರ ಕನ್ನಡ ಯಕ್ಷಶ್ರೀ’ ಪ್ರಶಸ್ತಿಯನ್ನು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಯಕ್ಷಗಾನ ಕಲಾರಂಗಕ್ಕೆ ಪ್ರದಾನ ಮಾಡಿದರು.
ಉಡುಪಿ: ಸಂಪತ್ತನ್ನು ಪರಮಾತ್ಮನಿಗೆ ಅರ್ಪಿಸಿದಾಗ ಬದುಕು ಬಂಗಾರವಾಗುತ್ತದೆ. ಯಕ್ಷಗಾನ ಕಲೆ ವೃತ್ತಿಯಲ್ಲ. ಹೀಗಾಗಿ ಕಲೆಯನ್ನು ಸಂರಕ್ಷಿಸುವ ಕಲಾವಿದರನ್ನು ಪೋಷಿಸುವುದು ಭಗವಂತನ ಸೇವೆಯಾಗುತ್ತದೆ ಎಂದು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹೇಳಿದರು.
ಶ್ರೀಕೃಷ್ಣ ಮಠ, ಪರ್ಯಾಯ ಶೀರೂರು ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗ ವತಿಯಿಂದ ಯಕ್ಷಗಾನ ಕಲಾವಿದರ ಸಮಾವೇಶ ಸಮಾರೋಪದಲ್ಲಿ ಅವರು ಅಶೀರ್ವಚನ ನೀಡಿದರು.
ದೇಶದಲ್ಲಿ ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಕಲಾವಿದರ ಪಾತ್ರ ದೊಡ್ಡದು. ಮಹಾಭಾರತ, ರಾಮಾಯಣಗಳನ್ನು ಜನರು ಓದಿಲ್ಲದಿದ್ದರೂ ಯಕ್ಷಗಾನ ಮುಂತಾದ ಕಲಾ ಮಾಧ್ಯಮಗಳಿಂದ ಪುರಾಣ ಕಥೆಗಳನ್ನು ಎಲ್ಲರೂ ತಿಳಿದಿದ್ದಾರೆ ಎಂದು ಹೇಳಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲಾವಿದರು ಪುರಾಣದ ಪಾತ್ರಗಳನ್ನು ಲೋಕಕ್ಕೆ ತೋರಿಸುವವರು. ಜನಸಾಮಾನ್ಯರ ಆಟ-ಕೂಟ ಯಕ್ಷಗಾನ ಕಲಾವಿದರು ಸಮಾಜದ ಆಸ್ತಿ ಎಂದು ಹೇಳಿದರು.
ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಶುಭಾಶಂಸನಗೈದರು. ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಗೊಳೆ, ಯಕ್ಷಗಾನ ಪೋಷಕ ಪಣಂಬೂರು ವಾಸುದೇವ ಐತಾಳ್, ಸಿಎ ಗಣೇಶ್ ಕಾಂಚನ್, ಉದ್ಯಮಿಗಳಾದ ಪಿ. ಪುರುಷೋತ್ತಮ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಹರಿಯಪ್ಪ ಕೋಟ್ಯಾನ್, ಆನಂದ ಪಿ. ಸುವರ್ಣ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಟೀಲು ಮೇಳದ ಕಲಾವಿದ ಶ್ರುತಕೀರ್ತಿ ರಾಜ್ ರಚಿಸಿದ ‘ಯಕ್ಷಗಾನ ಶ್ರೀರಾಮ ಸೂಕ್ತ’ ಪುಸ್ತಕವನ್ನು ಬಿಡುಗಡೆಮಾಡಲಾಯಿತು. ಕೊಂಡದಕುಳಿ ರಾಮಚಂದ್ರ ಹೆಗಡೆ ಪೂರ್ಣಚಂದ್ರ ಕಲಾ ಪ್ರತಿಷ್ಠಾನದ ವತಿಯಿಂದ 25,000 ನಗದು ಪುರಸ್ಕಾರದ ‘ಕೊಂಡದಕುಳಿ ರಾಮ ಹೆಗಡೆ’ ಪ್ರಶಸ್ತಿ ಮತ್ತು 1 ಲಕ್ಷ ರೂ. ನಗದು ಪುರಸ್ಕಾರ ಒಳಗೊಂಡ ‘ಉತ್ತರ ಕನ್ನಡ ಯಕ್ಷಶ್ರೀ’ ಪ್ರಶಸ್ತಿಯನ್ನು ಯಕ್ಷಗಾನ ಕಲಾರಂಗಕ್ಕೆ ಪ್ರದಾನ ಮಾಡಿದರು. ಕಲಾವಿದ ಸತೀಶ್ ಪೂಜಾರಿ ನೈನಾಡು ಇವರಿಗೆ ರೂ. 25,000 ವೈದ್ಯಕೀಯ ನೆರವು ನೀಡಲಾಯಿತು. 20 ಜನ ಕಲಾವಿದರಿಗೆ ತಲಾ 20,000 ರೂ. ಗೃಹನಿರ್ಮಾಣ ಸಹಾಯಧನ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ವಿವಿಧ ಮೇಳದ 800ಕ್ಕೂ ಅಧಿಕ ಕಲಾವಿದರು ಸಮಾವೇಶದಲ್ಲಿ ಭಾಗವಹಿಸಿದ್ದರು. ಬೆಳಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಜರಗಿತು.