ಡಾ. ಕೆ. ಎಂ. ರಾಘವ ನಂಬಿಯಾರ್ ಅವರಿಗೆ ಅತ್ಯುನ್ನತ ಪಾರ್ಥಿಸುಬ್ಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಡುಪಿ: ಎಂಜಿಎಂ ಕಾಲೇಜಿನ ಆರ್ ಆರ್ ಸಿಯಲ್ಲಿರುವ ಹಳೇ ಯಕ್ಷಗಾನ ವಿಡಿಯೋಗಳು, ಪ್ರಸಂಗಗಳು ಸಹಿತ ಯಕ್ಷಗಾನಕ್ಕೆ ಸಂಬಂಧಿಸಿದ ಹಳೆಯ ದಾಖಲೆಗಳನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಿ ಸಾರ್ವಜನಿಕರಿಗೆ ಅಧ್ಯಯನಕ್ಕೆ ಮುಕ್ತಗೊಳಿಸಲಾಗುವುದು ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.
ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ 2025ನೇ ಸಾಲಿನ ಪ್ರತಿಷ್ಠಿತ ಪಾರ್ಥಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.
ಯಕ್ಷಗಾನ ಕರಾವಳಿ ಮಣ್ಣಿನ ಕಲೆಯಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯಕ್ಷಗಾನ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಕಟೀಲು ದೇವಸ್ಥಾನ ಅರ್ಚಕ ಹರಿನಾರಾಯಣ ಅಸ್ರಣ್ಣ ಮಾತನಾಡಿ, ಯಕ್ಷಗಾನದಲ್ಲಿ ಅನೇಕ ನಕಾರಾತ್ಮಕ ಬದಲಾವಣೆಗಳಾಗುತ್ತಿರುವುದು ಖೇದಕರ ವಿಚಾರ. ಯಕ್ಷಗಾನ ಕಲೆಗೆ ಯಾವುದೇ ಅಪಚಾರವಾಗದಂತೆ ಕಲಾವಿದರು ಎಚ್ಚರವಹಿಸಬೇಕು ಎಂದು ಹೇಳಿದರು.
ದೇವಸ್ಥಾನ ಆಡಳಿತ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಸಮಾರಂಭ ಉದ್ಘಾಟಿಸಿದರು.
ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸತಿ ಇಲಾಖೆ ನಿರ್ದೇಶಕ ಡಾ. ಮಂಜುನಾಥ ಸ್ವಾಮಿ, ಉದ್ಯಮಿ ಗೋಪಾಲ ಬಂಗೇರ, ಪ್ರಸಾದ್ ರಾಜ್ ಕಾಂಚನ್, ರಿಜಿಸ್ಟ್ರಾರ್ ನಮ್ರತಾ, ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.
ಡಾ. ಕೆ. ಎಂ. ರಾಘವ ನಂಬಿಯಾರ್ ಅವರಿಗೆ ಅತ್ಯುನ್ನತ ಪಾರ್ಥಿಸುಬ್ಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೆಂಜಾಳ ರಾಮಕೃಷ್ಣ ರಾವ್, ವಿಷ್ಣು ಮಂಜಪ್ಪ ಆಚಾರಿ ಬಳ್ಕೂರು, ಡಿ. ಮನೋಹರ್ ಕುಮಾರ್, ಮುರಲಿ ಕಡೆಕಾರ್ ಮತ್ತು ರಮೇಶ್ ಅವರಿಗೆ ಅಕಾಡೆಮಿ ಗೌರವ ಪ್ರಶಸ್ತಿ, ಸಣ್ಣಮಲ್ಲಯ್ಯ, ಲಕ್ಷ್ಮಣ ಗೌಡ ಬೆಲಾಲ್, ದಾಸಪ್ಪ ಗೌಡ ಗೇರುಕಟ್ಟೆ, ಎ. ಬಿ. ನಾಗರಾಜು, ದಾಸನಡ್ಕ ರಾಮ ಕುಲಾಲ್, ರಾಜೀವ ಶೆಟ್ಟಿ ಹೊಸಂಗಡಿ, ಕೇಶವ ಶಕ್ತಿನಗರ, ಸದಶಿವ ಕುಲಾಲ್, ಬೆಳ್ಳಾರೆ ಮಂಜುನಾಥ ಭಟ್ ಮತ್ತು ಜಿ. ಕೆ. ಶ್ರೀನಿವಾಸ ಸಾಲಿಯಾನ್ ಅವರಿಗೆ ಯಕ್ಷಸಿರಿ ಪ್ರಶಸ್ತಿ , ದೇವದಾಸ ರಾವ್ ಕೊಡ್ಗಿ ಅವರಿಗೆ ದಿ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಸ್ಮರಣಾರ್ಥ ನೀಡುವ ದತ್ತಿನಿಧಿ ಪ್ರಶಸ್ತಿ ನೀಡಲಾಯಿತು. ಅಶೋಕ್ ಹಾಸ್ಯಗಾರ ಮತ್ತು ಕೆರೆಮನೆ ಶಿವಾನಂದ ಹೆಗಡೆ ಹಾಗೂ ಮಣಿಪಾಲ ಯುನಿವರ್ಸಲ್ ಪ್ರೆಸ್ ಪ್ರತಿನಿಧಿ 2024ನೇ ಸಾಲಿನ ಪುಸ್ತಕ ಬಹುಮಾನ ಸ್ವೀಕರಿಸಿದರು.