ಉಡುಪಿಯ ಪರ್ಯಾಯ ಶೀರೂರು ಮಠದಲ್ಲಿ ವೇದವರ್ಧನ ಶ್ರೀಗಳ ಉಪಸ್ಥಿತಿಯಲ್ಲಿ ಯಕ್ಷಶಿಕ್ಷಣ ಟ್ರಸ್ಟ್ನ ವಿಶ್ವಸ್ಥರ ಸಭೆ ನಡೆಯಿತು. ಯಶ್ಪಾಲ್ ಸುವರ್ಣ, ಡಾ. ಉದಯಕುಮಾರ್ ಸರಳತ್ತಾಯ, ಮುರಳಿ ಕಡೆಕಾರ್, ಎಂ.ಗಂಗಾಧರ್ ರಾವ್, ನಾರಾಯಣ ಎಂ. ಹೆಗಡೆ ಇತರರಿದ್ದರು.
* ಕಾರ್ಯದರ್ಶಿ ಮುರಳಿ ಕಡೆಕಾರ್ ಮಾಹಿತಿ
* ಶೀರೂರು ಮಠದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ನ ಸಭೆ
ಉಡುಪಿ: ಯಕ್ಷಗಾನ ಕಲಾರಂಗದ ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಈ ವರ್ಷ ಉಡುಪಿ, ಕಾಪು, ಕುಂದಾಪುರ, ಬೈಂದೂರು ತಾಲೂಕುಗಳ 99 ಪ್ರೌಢಶಾಲೆಗಳ ಯಕ್ಷಗಾನ ಪ್ರದರ್ಶನ ನ.16ರಿಂದ ಆರಂಭಗೊಂಡು ಡಿಸೆಂಬರ್ ಅಂತ್ಯದವರೆಗೆ ನಡೆಯಲಿದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾಹಿತಿ ನೀಡಿದರು.
ಉಡುಪಿಯ ಪರ್ಯಾಯ ಶೀರೂರು ಮಠದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ನ ಗೌರವಾಧ್ಯಕ್ಷರಾದ ವೇದವರ್ಧನ ತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ಶುಕ್ರವಾರ (ಆ.28) ನಡೆದ ಟ್ರಸ್ಟ್ನ ವಿಶ್ವಸ್ಥರ ಸಭೆಯಲ್ಲಿ ಮಾತಾಡಿದರು.
3 ಸಾವಿರಕ್ಕೂ ಅಧಿಕ ಮಕ್ಕಳು
ಪರ್ಯಾಯ ಶ್ರೀಗಳು, ನಾಲ್ವರು ಶಾಸಕರು, ಅನೇಕ ದಾನಿಗಳು ಹಾಗೂ ಯಕ್ಷಗಾನ ಗುರುಗಳ ಪೂರ್ಣ ಸಹಕಾರದಲ್ಲಿ ಯಕ್ಷ ಶಿಕ್ಷಣ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಕಳೆದ ವರ್ಷ 94 ಶಾಲೆಗಳ 3,035 ವಿದ್ಯಾರ್ಥಿಗಳು ಯಶಸ್ವಿಯಾಗಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷ ಶಿಕ್ಷಣ ಪಡೆದಿರುವುದು ವಿಶೇಷ ಎಂದರು.
ಉಡುಪಿಯ ಶಾಸಕ, ಟ್ರಸ್ಟ್ನ ಅಧ್ಯಕ್ಷರೂ ಆದ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಪರ್ಯಾಯ ಮಠದ ದಿವಾನ, ಟ್ರಸ್ಟ್ನ ಉಪಾಧ್ಯಕ್ಷ ಡಾ.ಉದಯಕುಮಾರ್ ಸರಳತ್ತಾಯ, ವಿಶ್ವಸ್ಥರಾದ ಎಂ.ಗಂಗಾಧರ್ ರಾವ್, ನಾರಾಯಣ ಎಂ. ಹೆಗಡೆ, ವಿ.ಜಿ. ಶೆಟ್ಟಿ, ಗಣೇಶ್ ಬ್ರಹ್ಮಾವರ, ವಿದ್ಯಾಪ್ರಸಾದ್, ಪ್ರಭಾಕರ್ ಭಂಡಿ, ನಾಗರಾಜ್ ಹೆಗಡೆ, ಉಮೇಶ ಭಟ್, ದಾನಿಗಳಾದ ಸುದರ್ಶನ ಮೂರ್ತಿ ದಂಪತಿ ಉಪಸ್ಥಿತರಿದ್ದರು.
ಟ್ರಸ್ಟ್ನ ವಾರ್ಷಿಕ ವರದಿ, ಪರಿಶೋಧಿತ ಲೆಕ್ಕಪತ್ರ ಮಂಡಿಸಲಾಯಿತು. ಸಭೆಯಲ್ಲಿ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಯಕ್ಷಗಾನ ಗುರು, ಪ್ರಸಾಧನ ತಜ್ಞ ಕೃಷ್ಣಸ್ವಾಮಿ ಜೋಶಿ ಅವರ ಸೇವೆ ಸ್ಮರಿಸಿ, ಸದ್ಗತಿಗಾಗಿ ಪ್ರಾರ್ಥಿಸಲಾಯಿತು.
ಎಂದೂ ಮಾಸದ-ನಶಿಸದ, ಸದಾ ಹೊಸತನದ ಹೊಳಪು ಹೊಂದಿರುವ ಕಲೆ ಯಕ್ಷಗಾನ. ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡುತ್ತಿರುವುದು ಶ್ರೇಷ್ಠ ಕಾರ್ಯ. ಈ ಕಲಿಕೆಯಿಂದಾಗಿ ಅವರಿಗೆ ಸುಲಭವಾಗಿ ಪೌರಾಣಿಕ ಕಥೆಗಳು ತಿಳಿದು ಬರುತ್ತದೆ. ಸಮಾಜದಲ್ಲಿ ನಾವು ಹೇಗೆ ಬದುಕಬೇಕು, ನಮ್ಮ ವರ್ತನೆ ಹೇಗಿರಬೇಕು ಎನ್ನುವುದು ಅವರಿಗೆ ಸುಲಭವಾಗಿ ಅರ್ಥವಾಗುತ್ತದೆ.
— ವೇದವರ್ಧನ ತೀರ್ಥ ಶ್ರೀಪಾದರು. ಪರ್ಯಾಯ ಶೀರೂರು ಮಠ.