ಯಕ್ಷಶಿಕ್ಷಣ ಸನಿವಾಸ ಶಿಬಿರ ಸಮಾರೋಪ ಸಮಾರಂಭ.
ಉಡುಪಿ: ಭಾರತ ವಿಶ್ವದಲ್ಲೇ ಅತ್ಯಂತ ಯುವ ದೇಶ. ಜನಸಂಖ್ಯೆಯಲ್ಲಿ ಶೇ.50ಕ್ಕಿಂತ ಹೆಚ್ಚು ಮಂದಿ ಯುವಕರಿದ್ದಾರೆ. ಹೀಗಾಗಿ ಯುವ ಜನಾಂಗಕ್ಕೆ ಭಾರತೀಯ ಸಂಸತಿ ಮತ್ತು ಸಂಸ್ಕಾರವನ್ನು ದಾಟಿಸುವ ಕೆಲಸ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಲಾರಂಗ ಮಾದರಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಭೀಮ ಗೋಲ್ಡ್ ಪ್ರಾಯೋಜಕತ್ವದಲ್ಲಿ ನಡೆದ ಒಂದು ವಾರದ ಯಕ್ಷಶಿಕ್ಷಣ ಸನಿವಾಸ ಶಿಬಿರ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪದವೀಧರ ಯುವಕ&ಯುವತಿಯರು ಸಂವಹನ ಕೊರತೆಯಿಂದ ಉದ್ಯೋಗಕ್ಕೆ ಸೇರುವಾಗ ಸಂದರ್ಶನದಲ್ಲಿ ಸೋಲುತ್ತಿದ್ದಾರೆ. ಹೀಗಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಯಕ್ಷಶಿಕ್ಷಣ ತರಬೇತಿಯಲ್ಲಿ ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಗುರು ಬನ್ನಂಜೆ ಸಂಜೀವ ಸುವರ್ಣ, ಉದ್ಯಾವರ ಪಶುವೈದ್ಯಾಧಿಕಾರಿ ಡಾ. ಸಂದೀಪ್ ಶೆಟ್ಟಿ, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಹಿರಿಯಡಕದ ಉದ್ಯಮಿ ಶ್ರೀನಿವಾಸ ರಾವ್, ಭೀಮ ಜುವೆಲ್ಲರಿ ಮ್ಯಾನೇಜರ್ ರಾವೇಂದ್ರ ಭಟ್, ಪಣಂಬೂರು ವಾಸುದೇವ ಐತಾಳ್, ಕಲಾರಂಗ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಯಕ್ಷಶಿಕ್ಷಣ ತರಬೇತಿ ಪಡೆದ 103 ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಿತು.