* ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ್ ಸ್ಪಷ್ಟೀಕರಣ
ಉಡುಪಿ: ಜಿಪಂ ಕಚೇರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷತೆಯಲ್ಲಿ ನಡೆದಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಕಳದ ಯಕ್ಷ ರಂಗಾಯಣದಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಪ್ರಸ್ತಾಪಿಸಲಾಗಿತ್ತು. ಆದರೆ, ಯಕ್ಷ ರಂಗಾಯಣವು ಜಿಲ್ಲಾ ಮಟ್ಟದ ಎಲ್ಲ ಕಾರ್ಯಕ್ರಮಗಳಲ್ಲಿಯೂ ತಪ್ಪದೆ ಶಿಷ್ಟಾಚಾರ ಪಾಲಿಸುತ್ತ ಬಂದಿದೆ ಎಂದು ಸಂಸ್ಥೆಯ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ್ ಸ್ಪಷ್ಟೀಕರಣ ನೀಡಿದ್ದಾರೆ.
ಯಕ್ಷ ರಂಗಾಯಣದ ರೆಪರ್ಟರಿ ನಾಟಕಕ್ಕೆ ಸಂಬಂಧಿಸಿದಂತೆ ಕರಪತ್ರ ಪ್ರಕಟಿಸಲಾಗಿದ್ದು, ಸದರಿ ಕರಪತ್ರದಲ್ಲಿ ಇಲಾಖಾ ಸಚಿವರ ಸಂದೇಶ ಮತ್ತು ಪ್ರದರ್ಶನಕ್ಕೆ ಸಿದ್ಧಗೊಂಡ ನಾಟಕದ ವಿವರ ಹಾಗೂ ಕಲಾವಿದರ ಮಾಹಿತಿ ನೀಡಲಾಗಿದೆ. ಇದನ್ನು ರಾಜ್ಯದ ಇನ್ನಿತರ 5 ರಂಗಾಯಣಗಳೂ ಸಹ ಪಾಲಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಹಿಂದೆ 2023ರಲ್ಲಿ ಯಕ್ಷ ರಂಗಾಯಣದಲ್ಲಿ ಸಿದ್ಧಗೊಂಡ ಮೊದಲ ನಾಟಕ 'ಅಮರ ಕ್ರಾಂತಿ'ಯ ಬಗ್ಗೆ ಕರಪತ್ರ ಸಿದ್ಧಪಡಿಸಲಾಗಿತ್ತು. ಅದರಲ್ಲಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ವಿ.ಸುನೀಲ್ ಕುಮಾರ್ ಅವರ ಸಂದೇಶದೊಂದಿಗೆ ಪ್ರಕಟಿಸಲಾಗಿತ್ತು. ಅದೇ ಪರಂಪರೆ ಯಕ್ಷ ರಂಗಾಯಣದಲ್ಲಿ ಮುಂದುವರಿದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.