* ಉಡುಪಿ ಜಿಲ್ಲಾಡಳಿತದಿಂದ ವಸ್ತ್ರ ಸಂಹಿತೆ, ಮಾರ್ಗಸೂಚಿ ಬಿಡುಗಡೆ
* ಜಿಲ್ಲೆಯ 6 ಕೇಂದ್ರಗಳಲ್ಲಿ ಖಾಕಿ ಭದ್ರತೆ, 2,367 ಅಭ್ಯರ್ಥಿಗಳ ನೋಂದಣಿ
ಉಡುಪಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ವತಿಯಿಂದ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಉಡುಪಿ ಜಿಲ್ಲೆಯಲ್ಲಿ ಇಂದು (ಆ.2) 6 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕಾದ ವಸ್ತ್ರ ಸಂಹಿತೆ, ರೀತಿ-ನಿಯಮ ಕುರಿತು ಉಡುಪಿ ಜಿಲ್ಲಾಡಳಿತ ಮಾರ್ಗಸೂಚಿ ಪಟ್ಟಿ ಬಿಡುಗಡೆ ಮಾಡಿದೆ.
ಬೆಳಗ್ಗೆ 10:30ರಿಂದ ಮಧ್ಯಾಹ್ನ 12ರ ವರೆಗೆ ಪರೀಕ್ಷೆ ನಡೆಯಲಿದ್ದು, ಒಟ್ಟು 2,367 ಅಭ್ಯರ್ಥಿಗಳು ನೋಂದಣಿ ಮಾಡಿದ್ದಾರೆ. ಇದು ಸ್ಪರ್ಧಾತ್ಮಕ ಪರೀಕ್ಷೆಯಾಗಿದ್ದರಿಂದ ಯಾವುದೇ ಅಕ್ರಮಗಳಿಗೆ ಆಸ್ಪದ ನೀಡದೆ, ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿದೆ.
ನಿಷೇಧಿತ ವಸ್ತುಗಳು
ಪರೀಕ್ಷೆ ಬೆಳಗ್ಗೆ 10:30ಕ್ಕೆ ಪ್ರಾರಂಭವಾಗಲಿದ್ದರೂ ಅಭ್ಯರ್ಥಿಗಳು ಬೆಳಗ್ಗೆ 9.30ರೊಳಗೆ ಕಡ್ಡಾಯವಾಗಿ ಪರೀಕ್ಷಾ ಕೇಂದ್ರದ ಆವರಣದಲ್ಲಿ ಹಾಜರಿದ್ದು, ತಪಾಸಣೆಗೆ ಒಳಪಡಬೇಕು. ಪರೀಕ್ಷಾ ಪಾವಿತ್ರ್ಯ ಕಾಪಾಡಲು ಯಾವುದೇ ವಸ್ತುಗಳನ್ನು ತರುವಂತಿಲ್ಲ. ಮೊಬೈಲ್ ಫೋನ್, ಇಯರ್ ಫೋನ್, ಮೈಕ್ರೋಫೋನ್, ಪೇಜರ್, ಹೆಡ್ ಪೋನ್, ಸ್ಮಾರ್ಟ್ ವಾಚ್, ಕ್ಯಾಮರಾ, ಪೆನ್ಡೆವ್, ಕ್ಯಾಲ್ಕುಲೇಟರ್ ಅಥವಾ ಯಾವುದೇ ರೀತಿಯ ಇಲೆಕ್ಟ್ರಾನಿಕ್ ಉಪಕರಣ ತರುವಂತಿಲ್ಲ.
ಪೆನ್ಸಿಲ್, ಇರೆಸರ್, ಜಾಮಿಟ್ರಿ ಬಾಕ್ಸ್, ಪ್ಲಾಸ್ಟಿಕ್ ವೌಚ್, ಸೋಲ್, ಲಾಗ್ ಟೇಬಲ್, ಯಾವುದೇ ಮುದ್ರಿತ ಅಥವಾ ಕೈಬರಹದ ಚೀಟಿ, ಬಿಡಿ ಹಾಳೆು, ನೋಟ್ಬುಕ್ ಹಾಗೂ ರೆಕಾರ್ಡಿಗ್ ವಸ್ತು, ಹ್ಯಾಂಡ್ ಬ್ಯಾಗ್, ಪರ್ಸ್, ವಾಲೆಟ್ (ಹಣದ ಚೀಲ) ಗಾಗಲ್ಸ್ (ಸನ್ ಗ್ಲಾಸ್) ಅಗಲವಾದ ಬೆಲ್ಟ್, ಕ್ಯಾಪ್ ತರುವಂತಿಲ್ಲ. ಯಾವುದೇ ರೀತಿಯ ಆಹಾರ ಪದಾರ್ಥ ಮತ್ತು ನೀರಿನ ಬಾಟಲಿ ತರಲೂ ಅನುಮತಿಯಿಲ್ಲ. ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಕೊಠಡಿಗಳಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ.
ಹೀಗೆದೆ ವಸ್ತ್ರ ಸಂಹಿತೆ
ಉದ್ದ ತೋಳಿನ ಶರ್ಟ್, ಕುರ್ತಾ ಧರಿಸಬಾರದು. ಅರ್ಧ ತೋಳಿನ ಸರಳ ಉಡುಪು ಮಾತ್ರ ಧರಿಸಬೇಕು. ಇಲೆಕ್ಟ್ರಾನಿಕ್ ಉಪಕರಣ ಅಥವಾ ಮೈಕ್ರೋ ಚಿಪ್ ಬಚ್ಚಿಡಲು ಅನುಕೂಲ ಆಗುವಂತಹ ಜೇಬುಗಳಿರುವ, ದೊಡ್ಡ ಬಟನ್ಗಳಿರುವ ಅಥವಾ ಅತಿಯಾದ ವಿನ್ಯಾಸವಿರುವ ಉಡುಪು ಧರಿಸುವಂತಿಲ್ಲ. ಕಿವಿ, ತಲೆ ಅಥವಾ ಮುಖ ಮುಚ್ಚುವಂತಹ ಯಾವುದೇ ರೀತಿಯ ಕ್ಯಾಪ್, ಮಾಸ್ಕ್, ಸ್ಕಾರ್ಪ್ ಅಥವಾ ಮುಸುಕು ಧರಿಸುವಂತಿಲ್ಲ. ಯಾವುದೇ ರೀತಿಯ ಲೋಹದ ಆಭರಣ, ಬಳೆ, ಸರ, ಉಂಗುರ, ಕೈಗಡಿಯಾರ, ಬೂಟ್ ಅಥವಾ ದಪ್ಪ ಅಡಿಯ ಪಾದರಕ್ಷೆ ಧರಿಸಬಾರದು. ಸರಳವಾದ ಚಪ್ಪಲಿ ಧರಿಸಿರಬೇಕು.
ಯಾವುದಕ್ಕೆ ವಿನಾಯಿತಿ?
ಪುರುಷ ಅಭ್ಯರ್ಥಿಗಳು ಜನಿವಾರ ಮತ್ತು ಶಿವದಾರ ಧರಿಸಿ ಹಾಜರಾಗಬಹುದು. ಮಹಿಳಾ ಅಭ್ಯರ್ಥಿಗಳಿಗೆ ಮಂಗಲಸೂತ್ರ ಮತ್ತು ಮೂಗುತಿ ಧರಿಸಿ ಬರಲು ಸಂಪೂರ್ಣ ಅವಕಾಶವಿದೆ. ಆದರೆ, ಧಾರ್ಮಿಕ ಸಂಪ್ರದಾಯದ ಉಡುಪು ಧರಿಸಿಯೇ ಪರೀಕ್ಷೆ ಬರೆಯುವವರು ಪ್ರತ್ಯೇಕ ಪರಿಶೀಲನೆಗೆ ಒಳಪಡಬೇಕು. ಇಂಥವರು ಪರೀಕ್ಷೆ ಆರಂಭಕ್ಕೆ 2 ಗಂಟೆಗಳ ಮುಂಚಿತವಾಗಿ ಬೆಳಗ್ಗೆ 8:30ಕ್ಕೇ ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು. ಶ್ರವಣ ಸಾಧನ ಅಥವಾ ಕೋಕ್ಲಿಯರ್ ಇಂಪ್ಲಾಂಟ್ ಬಳಸುವ ವಿಶೇಷ ಚೇತನ ಅಭ್ಯರ್ಥಿಗಳಿದ್ದಲ್ಲಿ ಅವರೂ ಸಹ ಬೆಳಗ್ಗೆ 8:30ಕ್ಕೇ ಹಾಜರಾಗಬೇಕು.
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಸೇರಿದಂತೆ ಯಾವುದೇ ಇಲೆಕ್ಟ್ರಾನಿಕ್ ಸಾಧನಗಳ ಬಳಕೆ ಸಂಪೂರ್ಣ ತಡೆಯಲು ಜಾಮರ್ ಅಳವಡಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ವಹಿಸಲು ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಪ್ರಾಧಿಕಾರದ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ನಲ್ಲಿ ನೇರ ಮೇಲ್ವಿಚಾರಣೆ ನಡೆಯಲಿದೆ. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಮುಖ (ಚಹರೆ) ಗುರುತಿಸುವ ತಂತ್ರಜ್ಞಾನದ ಮೂಲಕ ಪರೀಸಿದ ಬಳಿಕ ಪರೀಕ್ಷಾ ಕೇಂದ್ರದೊಳಗೆ ತೆರಳಬೇಕು. ಎಲ್ಲ ಕೊಠಡಿಗಳಲ್ಲೂ ಸಿಸಿಟಿವಿ ಅಳವಡಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಇರಲಿದೆ. ಪ್ರತಿ 100 ಅಭ್ಯರ್ಥಿಗಳ ದೈಹಿಕ ತಪಾಸಣೆಗಾಗಿ ತಲಾ ಒಬ್ಬರಂತೆ ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಎಲ್ಲ ಕೇಂದ್ರಗಳಲ್ಲೂ ಆಂಬುಲೆನ್ಸ್ ವ್ಯವಸ್ಥೆ ಇರಲಿದೆ.
ಲಿಖಿತ ಪರೀಕ್ಷೆಯಲ್ಲಿ ಯಾವುದೆ ಅಕ್ರಮ ನಡೆಯದಂತೆ ತಡೆಯಲು ಎಲ್ಲ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಮೆಸ್ಕಾಂಗೆ ಸೂಚಿಸಲಾಗಿದೆ. ವಾಟ್ಸಾಪ್, ಟೆಲಿಗ್ರಾಂ, ಇನ್ಸ್ಟಾಗ್ರಾಂ, ಫೇಸ್ಬುಕ್, ಯೂಟ್ಯೂಬ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ನಕಲಿ ಪ್ರಶ್ನೆ ಪತ್ರಿಕೆ ಪ್ರಸಾರ ಅಥವಾ ಅಕ್ರಮ ಆರ್ಥಿಕ ವ್ಯವಹಾರ ನಡೆಸಿದರೆ ಕಾನೂನುಗಳಡಿ ಜೈಲು ಶಿಕ್ಷೆ ಸೇರಿ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುವುದು.
— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.