ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಒಂದೆಡೆ ಸುರಿಯುತ್ತಿರುವ ಭಾರಿ ಮಳೆ, ಇನ್ನೊಂದೆಡೆ ತಳಮಟ್ಟದ ನೌಕರರ ಮೇಲೆ ಅಧಿಕಾರಿಗಳ ಸತತ ಒತ್ತಡ, ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ‘ಎಸ್‌ಐಆರ್’ (ಸಾವಾಜಿಕ ಆರ್ಥಿಕ ಸರ್ವೇ, ಚುನಾವಣಾ ಪಟ್ಟಿ ಪರಿಷ್ಕರಣೆ ವಿಶೇಷ ಪ್ರಕ್ರಿಯೆ) ಕಾರ್ಯವು ತೀವ್ರ ಗೊಂದಲ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಪುನಃ ಕೆಳಹಂತದ ನೌಕರರ ಮೇಲೆ ಅನಗತ್ಯ ಕೆಲಸದ ಹೊರೆ ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಪ್ರಮಾಣಪತ್ರ ಇರುವವರಿಗೇಕೆ ಮತ್ತೆ ಹಂಚಿಕೆ?:
ಸಾರ್ವಜನಿಕರು ಈ ಹಿಂದೆಯೇ ಸರ್ಕಾರಿ ನಿಯವಾವಳಿಗಳ ಪ್ರಕಾರ ಅರ್ಜಿ ಸಲ್ಲಿಸಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ. ಆದರೆ ಈಗ ಕಂದಾಯ ಇಲಾಖೆ ಈಗಾಗಲೇ ಪ್ರಮಾಣಪತ್ರ ಹೊಂದಿರುವ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ, ಮೊಬೈಲ್ ಆ್ಯಪ್ ಮೂಲಕ ಅವರ ಭಾವಚಿತ್ರ ತೆಗೆದು, ಮರು ಪ್ರಮಾಣಪತ್ರ ಹಂಚುವಂತೆ ಸೂಚಿಸಿದೆ. ಈ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ನೌಕರರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಹಾಗೂ ಇನ್ನಿತರ ಇಲಾಖೆಗಳ ನೌಕರರ ಹೆಗಲಿಗೆ ಏರಿಸಲಾಗಿದೆ.
ಇಲ್ಲದವರಿಗೆ ಒದಗಿಸಿ
ಇದುವರೆಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಹೊಂದಿರುವವರಿಗೆ ಮತ್ತೆ ಮತ್ತೆ ಹಂಚಿ ಸಮಯ ಹಾಗೂ ಸಂಪನ್ಮೂಲ ಪೋಲು ವಾಡುವ ಬದಲು, ಸರ್ಕಾರ ಮತ್ತು ಕಂದಾಯ ಇಲಾಖೆ ಜನಪರ ನಿಲುವು ತಳೆಯಬೇಕಿದೆ. ಎಸ್‌ಐಆರ್ ಪ್ರತಿಕ್ರಿಯೆ ಪೂರ್ಣಗೊಳಿಸಲು ಯಾರ ಬಳಿ ಜಾತಿ ಆದಾಯ ಪ್ರಮಾಣಪತ್ರ ಇಲ್ಲವೋ ಅಂತಹವರನ್ನು ಗುರುತಿಸಿ ಅವರಿಗೆ ಕಂದಾಯ ಇಲಾಖೆಯೇ ನೇರವಾಗಿ ಪ್ರಮಾಣಪತ್ರ ಒದಗಿಸುವ ಕೆಲಸ ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.
ಅಧಿಕಾರಿಗಳು ಭೇಟಿ ನೀಡಲಿ
ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರ ಈ ಕುರಿತು ತಕ್ಷಣ ಗಮನಹರಿಸಿ, ನಿಯವಾವಳಿಗಳನ್ನು ಸರಳೀಕರಿಸಿ, ನೈಜ ಫಲಾನುಭವಿಗಳಿಗೆ ಅಥವಾ ಪ್ರಮಾಣಪತ್ರ ಇಲ್ಲದ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸೌಲಭ್ಯ ತಲುಪಿಸಿದರೆ, ಅದು ಸರ್ಕಾರಕ್ಕೆ ಮತ್ತು ಇಲಾಖೆಗೆ ಉತ್ತಮ ಹೆಸರು ತಂದು ಕೊಡುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಸಾಮಾಜಿಕ, ಆರ್ಥಿಕ ಸರ್ವೇ ಅಥವಾ ಚುನಾವಣಾ ಪಟ್ಟಿಯ ಪ್ರತಿಕ್ರಿಯೆಯಲ್ಲಿ ದಾಖಲೆ ಸಲ್ಲಿಸುವ ಸಂದರ್ಭ ಜನರಿಗೆ ತೊಂದರೆ ಆಗಬಾರದು. ದಾಖಲೆ ಪಡೆದುಕೊಳ್ಳಲು ಅಲೆದಾಡಬಾರದು ಎಂಬ ಉದ್ದೇಶದಿಂದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲು ಸರ್ಕಾರ ಸೂಚನೆ ನೀಡಿದೆ. ನಿಗದಿತ ಅವಧಿಯೊಳಗೆ ಎಸ್‌ಐಆರ್ ಕಾರ್ಯ ಪೂರ್ಣಗೊಳ್ಳಬೇಕಿರುವುದರಿಂದ ಎಲ್ಲ ಇಲಾಖೆಗಳ ನೌಕರರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ಪ್ರತಿಯೊಬ್ಬರಿಗೂ ಜಾತಿ, ಆದಾಯ ಪ್ರಮಾಣ ಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ.
— ರಶ್ಮಿ ಎಸ್.ಆರ್. ಕುಂದಾಪುರ ಸಹಾಯಕ ಆಯುಕ್ತೆ