ಕೋಟ ಪಡುಕೆರೆಯ ಹಂದಟ್ಟು ಸಮುದ್ರ ತೀರದಲ್ಲಿ ಶ್ರೀ ಬಾಲಾಂಜನೇಯ ಬೋಟ್‌ನ ಅವಶೇಷಗಳು. 
ಉಡುಪಿ

ಸಮುದ್ರ ಪಾಲಾದ ಬೋಟ್ ಅವಶೇಷ ಪತ್ತೆ

ಕುಂದಾಪುರ: ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಸಮುದ್ರದ ನೀರಿನಲ್ಲಿ ಬುಧವಾರ ಮುಳುಗಿದ್ದ ಶ್ರೀ ಬಾಲಾಂಜನೇಯ ಬೋಟ್‌ನ ಅವಶೇಷಗಳು ಕೋಟ ಪಡುಕೆರೆಯ ಹಂದಟ್ಟು ಸಮುದ್ರ ತೀರದಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.

ಸಮುದ್ರ ಪಾಲಾದ ಬೋಟ್ ಸಂಪೂರ್ಣ ಚೂರುಚೂರಾಗಿದ್ದು, ಬೋಟ್‌ನ ಅವಶೇಷಗಳು ಕಡಲ ತೀರದಲ್ಲಿ ಒಂದೇ ಕಡೆ ಬಂದು ಬಿದ್ದಿರುವುದು ವಿಶೇಷ. ಸ್ಥಳಕ್ಕೆ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಮೇಶ ಕೆ., ಉಪನಿರೀಕ್ಷಕ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಂಗೊಳ್ಳಿಯಿಂದ ಮೀನುಗಾರಿಕೆಗೆ ತೆರಳಿದ್ದ ನಾಗರಾಜ ಮೊಗೇರ ಮಾಲೀಕತ್ವದ ಶ್ರೀ ಬಾಲಾಂಜನೇಯ ಹೆಸರಿನ ಪರ್ಸಿನ್ ಬೋಟ್ ಗಂಗೊಳ್ಳಿ ಬಂದರಿನಿಂದ ಅನತಿ ದೂರದಲ್ಲಿ ಅಳಿವೆ ಪ್ರದೇಶದಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಹೋಗಿತ್ತು. ಸ್ಥಳೀಯ ಮೀನುಗಾರರು ಮತ್ತು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸರು ಅಪಾಯದಲ್ಲಿದ್ದ 27 ಮೀನುಗಾರರನ್ನು ರಕ್ಷಿಸಿದ್ದರು. ಬೋಟ್‌ನಲ್ಲಿದ್ದ ಬಲೆ ಮತ್ತಿತರ ಸಲಕರಣೆಗಳು ಸಮುದ್ರ ಪಾಲಾಗಿತ್ತು. ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ರಿಪೇರಿ ಕೆಲಸ ಮುಗಿಸಿ ಬುಧವಾರವಷ್ಟೇ ನೀರಿಗಿಳಿದಿದ್ದ ಈ ಪರ್ಸಿನ್ ಬೋಟ್ ಅದೇ ದಿನ ಅಳಿವೆ ಪ್ರದೇಶದಲ್ಲಿ ಅವಘಡಕ್ಕೀಡಾಗಿದೆ.