ಮಣಿಪಾಲ ಮಾಹೆಯ ಸಾರ್ವಜನಿಕ ಸಂಪರ್ಕ ವಿಭಾಗ ನಿರ್ದೇಶಕ ಭರತ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಉಡುಪಿ: ಯುಗದ ದೊಡ್ಡ ಜ್ಞಾನಿ ಕೃತಕ ಬುದ್ಧಿಮತ್ತೆ(ಎಐ). ಅದು ನಮಗೆ ವಿನಮ್ರತೆಯನ್ನು ಕಲಿಸಿಕೊಡುತ್ತದೆ. ಸದ್ಯ ಫೋಟೋಗ್ರಫಿ ಕ್ಷೇತ್ರದಲ್ಲಿ ಎಐ ಬಂಧನ ಎನಿಸಿದರೂ ಮುಂದಿನದಿನಗಳಲ್ಲಿ ನಂದನ ಆಗಲಿದೆ ಎಂದು ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್ ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಸತ್ಯಬೋಧ ಜೋಶಿ ಹೇಳಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಬುಧವಾರ ಆಯೋಜಿಸಲಾದ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
ಫೋಟೋಗ್ರಫಿಯಲ್ಲಿನ ಹೊಸ ಹೊಸ ತಂತ್ರಜ್ಞಾನವು ಹೊಸ ಜವಾಬ್ದಾರಿಯನ್ನು ನೀಡುತ್ತದೆ. ಇದೀಗ ಬಂದಿರುವ ಎಐ ಕೂಡ ನಮಗೆ ಹೊಸತನ್ನು ಕಲಿಯಲು ಸವಾಲು ನೀಡುತ್ತಿದೆ. ಎಐ ಸರಿಯಾಗಿ ಬಳಸಿ ಕೊಂಡರೇ ಅನುಕೂಲಗಳೇ ಜಾಸ್ತಿ. ಎಐ 10 ಹೆಜ್ಜೆ ಮುಂದಿಟ್ಟರೆ ನಾವು 100 ಹೆಜ್ಜೆ ಮುಂದೆ ಹೋಗಬೇಕಾಗುತ್ತದೆ ಎಂದರು.
ಕೃತಕ ಬುದ್ಧಿಮತ್ತೆಯ ಮೂಲಕ ನಮಗೆ ಕಡಿಮೆಯಾಗಿರುವ ಸಿಗುವ ತಂತ್ರಜ್ಞಾನದ ಹಿಂದೆ ಬಹಳ ದೊಡ್ಡ ಬಂಡವಾಳ ಇರುತ್ತದೆ. ಇದು ಮುಂದಿನ ಹಂತ ತಲುಪಿದ ಬಳಿಕ ಸಾಕಷ್ಟು ದುಬಾರಿ ಆಗುತ್ತದೆ. ಯಾವುದೇ ರೀತಿಯ ತಂತ್ರಜ್ಞಾನ ಬಂದರೂ ಅದನ್ನು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಣಿಪಾಲ ಮಾಹೆಯ ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ನಿರ್ದೇಶಕ ಭರತ್ ಕುಮಾರ್ ಮಾತನಾಡಿ, ಕಾಲ ಬದಲಾಗಿ ಹೊಸಹೊಸ ತಂತ್ರಜ್ಞಾನಗಳು ಬಂದರೂ ಫೋಟೋಗ್ರಫಿಯ ಮೂಲತತ್ವ ಬದಲಾಗಿಲ್ಲ. ಫೋಟೋಗ್ರಫಿ ಹಾಗೂ ಪತ್ರಿಕೋದ್ಯಮಗಳಿಗೆ ವೃತ್ತಿ ಸಂಹಿತೆ ಎಂಬುದು ಇದೆ. ಯಾವುದನ್ನು ಮಾಡಬೇಕು. ಯಾವುದನ್ನು ಮಾಡಬಾರದು ಎಂಬ ಆಲೋಚನಾ ಕ್ರಮ ಮನುಷ್ಯನಲ್ಲಿ ಇದೆಯೇ ಹೊರತು ಯಂತ್ರದಲ್ಲಿ ಬರುವುದಿಲ್ಲ. ಹಾಗಾಗಿ ಯಂತ್ರಗಳನ್ನು ಬಳಸುವವರು ವೃತ್ತಿ ಸಂಹಿತೆಯನ್ನು ಗಟ್ಟಿಯಾಗಿ ಪಾಲಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಂಕಿತ್ ಶೆಟ್ಟಿ, ಜಿಲ್ಲಾ ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಆಸ್ಟ್ರೊ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರಾದ ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿ, ಅಜಿತ್ ಆರಾಡಿ ವಂದಿಸಿದರು.