ಉಡುಪಿ: ವಿಶ್ವ ಮಾನಸಿಕ ಆರೋಗ್ಯ ದಿನ ಅಂಗವಾಗಿ ಅ. 10ರಂದು ಮಾನಸಿಕ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೆಂಬಲ ನೀಡುವ ಉದ್ದೇಶದಿಂದ ಬಾಳಿಗಾ ಆಸ್ಪತ್ರೆಯಲ್ಲಿ ಸೃಜನಶೀಲ ಕರಕುಶಲ ವಸ್ತುಗಳು ಹಾಗೂ ಚಿತ್ರಕಲೆಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯ 'ಅಭಯ', 'ಪರಿವರ್ತನ', 'ಡೇ-ಕೇರ್ ಸೆಂಟರ್' ಹಾಗೂ 'ಹೊಂಬೆಳಕು' ಸಂಸ್ಥೆಯ ನಿವಾಸಿಗಳಿಗೆ ಆಟೋಟ ಮತ್ತು ಚಿತ್ರಕಲೆ ಸ್ಪರ್ಧೆ ನಡೆಯಲಿದೆ. ಲಯನ್ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ರಮಾನಂದ ಕೆ., ರವಿರಾಜ್ ನಾಯಕ್, ಐಎಂಎ ಅಧ್ಯಕ್ಷ ಕೃಷ್ಣಮೂರ್ತಿ ಉಪಾಧ್ಯಾಯ, ಹರಾಲ್ಡ್ ಸೋನ್ಸ್, ಡಾ. ಎಚ್. ಗಣೇಶ್ ಪೈ ಮತ್ತಿತರರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಪಿ.ವಿ. ಭಂಡಾರಿ ವಹಿಸಲಿದ್ದಾರೆ ಎಂದರು.
ಸನ್ಮಾನ: ಮಾನಸಿಕ ಅನಾರೋಗ್ಯದಿಂದ ಗುಣಮುಖರಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸುತ್ತಿರುವ ವ್ಯಕ್ತಿಗಳನ್ನು ಹಾಗೂ ಅವರ ಆರೈಕೆದಾರರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು ಎಂದರು.
ನೇತ್ರತಜ್ಞೆ ಡಾ. ಶಕೀಲಾ ಮಾತನಾಡಿ, ಮಂಜುನಾಥ ಐ ಹಾಸ್ಪಿಟಲ್ ಹಾಗೂ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಜಿಲ್ಲೆಯ 1900 ಅಂಗನವಾಡಿಗಳಲ್ಲಿ ಮಕ್ಕಳಿಗೆ ಕಣ್ಣಿನ ಆರೋಗ್ಯ ತಪಾಸಣೆ ನಡೆಸಲು ಉದ್ದೇಶಿಸಲಾಗಿದ್ದು, ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಗಣೇಶ್ ಮಲ್ಯ, ಲಯನ್ಸ್ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್, ಡಾ. ರವಿರಾಜ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.