ಪತ್ರಿಕಾ ಭವನದಲ್ಲಿ ಕಾರ್ಕಳ ಕುದುರೆಮುಖ ವನ್ಯಜಿವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ್​ ಬಾಬು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.  
ಉಡುಪಿ

ಆನೆ ನಿಯಂತ್ರಣಕ್ಕೆ ಹೈಟೆಕ್​ ಬ್ಯಾರಿಕೇಡ್​ ಅಳವಡಿಕೆ: ಸಿವರಾಮ್​ ಬಾಬು

ಗೋಪಾಲಕೃಷ್ಣ ಪಾದೂರ್
ಉಡುಪಿ: ಹಾಸನ, ಕೊಡಗು ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಆನೆಗಳ ಉಪಟಳ ತೀರಾ ಕಡಿಮೆ ಇದೆ. ಆದರೂ ಕಾರ್ಕಳ ಭಾಗದಲ್ಲಿ ಆನೆ ಕಂದಕಗಳನ್ನು ನಿರ್ಮಿಸಲಾಗಿದೆ. ರೈಲ್ವೆ ಬ್ಯಾರಿಕೇಡ್​ ಆನೆಗಳ ಸಂಚಾರ ತಡೆಯುವಲ್ಲಿ ಶೇ. 99ರಷ್ಟು ಯಶಸ್ವಿಯಾಗಿದೆ. ಹಾಸನ ಮತ್ತು ಕೊಡಗು ಭಾಗದಲ್ಲಿ ಉತ್ತಮ ಫಲಿತಾಂಶ ನೀಡಿದೆ ಎಂದು ಕಾರ್ಕಳ ಕುದುರೆಮುಖ ವನ್ಯಜಿವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ್​ ಬಾಬು ಎಂ. ಹೇಳಿದ್ದಾರೆ.

ಶುಕ್ರವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ಭವನದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ, ನಂತರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ವರ್ಷ ಕುದುರೆಮುಖ ಭಾಗದಲ್ಲಿ ಒಂದು ಆನೆಯ ಕಾಟ ಹೆಚ್ಚಾದಾಗ ಇಲಾಖೆಯು ಸುಮಾರು 200 ರಿಂದ 300 ಸಿಬ್ಬಂದಿ ಹಾಗೂ ಕುಮ್ಕಿ ಆನೆಗಳ ಸಹಾಯದಿಂದ ಕೇವಲ 2-3 ದಿನಗಳಲ್ಲಿ ಅದನ್ನು ಯಶಸ್ವಿಯಾಗಿ ಸೆರೆಹಿಡಿದಿದೆ. ಆನೆಗಳ ಚಲನವಲನಗಳನ್ನು ಗಮನಿಸಲು ಎಇಸಿ ತಂಡವನ್ನು ರಚಿಸಲಾಗಿದೆ. ಆನೆಗಳು ಕಂಡುಬಂದ ತಕ್ಷಣ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಲಾಗುತ್ತದೆ. ಕಳೆದ ವರ್ಷ ಹೆಬ್ರಿ ಹಾಗೂ ಆಗುಂಬೆ ಘಾಟಿ ಭಾಗದಲ್ಲಿ ಆನೆಗಳ ಓಡಾಟವಿದ್ದಾಗ ಮಕ್ಕಳನ್ನು ಇಲಾಖೆಯ ವತಿಯಿಂದಲೇ ವಾಹನದಲ್ಲಿ ಶಾಲೆಗೆ ಬಿಟ್ಟು ಬರುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವರ್ಷವೂ ಆನೆಗಳ ಚಲನವಲನದ ಆಧಾರದ ಮೇಲೆ ಈ ಸುರಕ್ಷತಾ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

ಸ್ಮಾರ್ಟ್​ ಸೋಲಾರ್​ ಫೆನ್ಸಿಂಗ್​
ಸೋಲಾರ್​ ಬೇಲಿಗಳು ಮಳೆಗಾಲದಲ್ಲಿ ಚಾರ್ಜ್​ ಆಗದೆ ದಕ್ಷತೆ ಕಳೆದುಕೊಳ್ಳುವ ಸಮಸ್ಯೆಗೆ ಇಲಾಖೆ ಹೊಸ ತಂತ್ರಜ್ಞಾನ ಕಂಡುಕೊಂಡಿದೆ. ಬೇಲಿಯಲ್ಲಿ ಯಾವಾಗಲೂ 9 ಕಿಲೋ ವೋಲ್ಟ್​ ವಿದ್ಯುತ್​ ಪಲ್ಸ್​ ಇರಬೇಕು. ಒಂದು ವೇಳೆ ಮರ ಬಿದ್ದೋ ಅಥವಾ ಬ್ಯಾಟರಿ ಡೌನ್​ ಆಗಿಯೋ ವೋಲ್ಟೇಜ್​ ಕಡಿಮೆಯಾದರೆ, ತಕ್ಷಣವೇ ಇಲಾಖೆಯ ಸಿಬ್ಬಂದಿಗೆ ಮೊಬೈಲ್​ ಸಂದೇಶ ಹೋಗುತ್ತದೆ. ಇದರಿಂದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬ್ಯಾಟರಿ ದುರಸ್ತಿ ಮಾಡಲು ಸಾಧ್ಯವಾಗುತ್ತದೆ. ಇಪಿಟಿ ಮತ್ತು ಸೋಲಾರ್​ ಬೇಲಿ ಎರಡನ್ನೂ ಒಟ್ಟಿಗೆ ಬಳಸುವುದರಿಂದ ಆನೆಗಳ ತಡೆಗೆ ಹೆಚ್ಚಿನ ಬಲ ಸಿಕ್ಕಂತಾಗಿದೆ ಎಂದರು.
ಮನೆ ಬಾಗಿಲಿಗೇ ಇ-ಪರಿಹಾರ
ಆನೆಗಳಿಂದ ಬೆಳೆ ಹಾನಿಯಾದರೆ ರೈತರು ಪರಿಹಾರಕ್ಕಾಗಿ ಅರ್ಜಿ ಹಿಡಿದು ಕಚೇರಿಗಳಿಗೆ ಅಲೆಯುವ ದಿನಗಳು ಮುಗಿದಿವೆ. ಇಲಾಖೆ 'ಇ-ಪರಿಹಾರ' ಆ್ಯಪ್​ ಜಾರಿಗೆ ತಂದಿದೆ. ಬೆಳೆ ಹಾನಿಯಾದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ನೇರವಾಗಿ ರೈತರ ಜಮೀನಿಗೆ ಭೇಟಿ ನೀಡಿ, ಆ್ಯಪ್​ ಮೂಲಕ ಫೋಟೋ ಹಾಗೂ ವಿವರಗಳನ್ನು ದಾಖಲಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆ ಅತ್ಯಂತ ವೇಗವಾಗಿ ನಡೆದು, ರೈತರ ಖಾತೆಗೆ ನೇರವಾಗಿ ಹಣ ಪಾವತಿಯಾಗುತ್ತಿದೆ ಎಂದರು.

ಚಿರತೆ ಹಾವಳಿ ನಿಯಂತ್ರಣಕ್ಕೆ ವಿಶೇಷ ಪಂಜರ
ಉಡುಪಿ ನಗರ ಮತ್ತು ಮಣಿಪಾಲದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಸಂರಕ್ಷಣಾ ಕ್ರಮಗಳಿಂದಾಗಿ ಅವುಗಳ ಸಂಖ್ಯೆಯೂ ವೃದ್ಧಿಸಿದೆ. ಚಿರತೆಗಳನ್ನು ಹಿಡಿಯಲು ಇಲಾಖೆಯು ವಿಶೇಷ ಪಂಜರಗಳನ್ನು ಸಿದ್ಧಪಡಿಸಿಕೊಂಡಿದೆ. ಚಿರತೆ ಕಾಣಿಸಿಕೊಂಡ ತಕ್ಷಣ ಪಂಜರ ಇಟ್ಟು, ಅವುಗಳನ್ನು ಹಿಡಿದು ಕಾಡಿನ ಆಳ ಪ್ರದೇಶಕ್ಕೆ ಬಿಡಲಾಗುತ್ತಿದೆ. ಮತ್ತೆ ಅದೇ ಚಿರತೆ ಸಿಕ್ಕೀಬಿಳುತ್ತಿದೆಯೇ ಎಂಬುದನ್ನು ಗುರುತಿಸಲು ಅವುಗಳ ಕಿವಿಗೆ ಟ್ಯಾಗ್​ ಹಾಕುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಇಲಾಖೆಯು ವಾರಕ್ಕೆ ಕನಿಷ್ಠ ಒಂದಾದರೂ ಚಿರತೆಯನ್ನು ರಕ್ಷಿಸಿ ಸ್ಥಳಾಂತರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್​, ಸಂಘದ ರಾಜ್ಯ ಸಮಿತಿ ಸದಸ್ಯ ಅಸ್ಟ್ರೊ ಮೋಹನ್​, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್​ ಕುಮಾರ್​ ಶಿರೂರು, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪತ್ರಿಕಾ ಭವನ ಸಹಸಂಚಾಲಕ ಗಣೇಶ್​ ಕಲ್ಯಾಣಪುರ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ ಸ್ವಾಗತಿಸಿದರು. ಯಶೋದಾ ಕೇಶವ್​ ಕಾರ್ಯಕ್ರಮ ನಿರೂಪಿಸಿದರು. ಅಜಿತ್​ ಹಾರಾಡಿ ವಂದಿಸಿದರು.
ℹ️

ಆನೆಗಳು ನಗರ ಪ್ರದೇಶಕ್ಕೆ ಬರಲು ಕಾರಣಗಳೇನು?
ಆನೆಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳಾಗಿದ್ದು, ತಲೆಮಾರುಗಳಿಂದ ಒಂದೇ ಜಾಗದಲ್ಲಿ ಸಂಚರಿಸುವ ಹವ್ಯಾಸ ಹೊಂದಿವೆ. ದಿನಕ್ಕೆ 200 ರಿಂದ 300 ಕೆ.ಜಿ ಆಹಾರ ಸೇವಿಸಿ 40 ರಿಂದ 50 ಕಿ.ಮೀ. ಸಂಚರಿಸುತ್ತವೆ. ಕಾಡಿನ ಅಂಚಿನ ಪ್ರದೇಶಗಳಲ್ಲಿ ಕಾಫಿ, ಅಡಿಕೆ ಮತ್ತು ಬಾಳೆ ತೋಟಗಳಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಕಾಡಿನ ಆಹಾರಕ್ಕಿಂತ ಸುಲಭವಾಗಿ ಸಿಗುವ ತೋಟ ಆಹಾರಕ್ಕಾಗಿ ನಾಡಿಗೆ ಲಗ್ಗೆ ಇಡುತ್ತಿವೆ. ಕರ್ನಾಟಕದಲ್ಲಿ ಸುಮಾರು 6,000ಕ್ಕೂ ಹೆಚ್ಚು ಆನೆಗಳಿದ್ದು, ಕೇವಲ 200 ರಿಂದ 300 ಆನೆಗಳು ಮಾತ್ರ ಈ ರೀತಿ ನಾಡಿಗೆ ಬರುತ್ತಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ್​ ಬಾಬು ಎಂ. ಹೇಳಿದ್ದಾರೆ.