ಉಡುಪಿ ಮಲ್ಪೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರದ ದಿನ ಆಚರಿಸಲಾಯಿತು. ಡಾ. ಬಾಲಕೃಷ್ಣ ಮದ್ದೋಡಿ, ಡಾ. ವರ್ಗೀಸ್​ ಪಿ., ಡಾ. ವಿಶಾಲಾಕ್ಷಿ ಹೆಗ್ಡೆ, ಸುಬ್ರಾಯ ಭಾಗವತ, ಪ್ರೊ. ಜಯಶ್ರೀ ಎಂ.ಸಿ. ಹಾಗೂ ವಿದ್ಯಾರ್ಥಿಗಳಿದ್ದರು. 
ಉಡುಪಿ

ಪ್ರಕೃತಿ ಶಿಕ್ಷಿಸುವ ಮೊದಲು ರಕ್ಷಿಸೋಣ

* ವಿಜ್ಞಾನಿ ಡಾ. ಬಾಲಕೃಷ್ಣ ಮದ್ದೋಡಿ ಕರೆ 

* ಮಲ್ಪೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ

ಉಡುಪಿ: ಇಂದಿನ ಯುವಕರು ನಾಶಗೊಳ್ಳುತ್ತಿರುವ ಪರಿಸರವನ್ನು ಪುನ: ಸ್ಥಾಪಿಸಲು ಆಂದೋಲನ ಪ್ರಾರಂಭಿಸಬೇಕು. ಪ್ರಕೃತಿ ನಮ್ಮ ವಿರುದ್ಧ ದಂಗೆ ಏಳುವ ಹಾಗೂ ನಮ್ಮನ್ನು ಶಿಸುವ ಮುನ್ನ ನಾವು ಜಾಗೃತರಾಗಬೇಕು ಎಂದು ಪರಿಸರ ವಿಜ್ಞಾನಿ ಡಾ. ಬಾಲಕೃಷ್ಣ ಎಸ್​. ಮದ್ದೋಡಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಲ್ಪೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರದ ದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಪರಿಸರ ರಾಯಭಾರಿಗಳಾಗಬೇಕು. ಭವಿಷ್ಯದ ಪೀಳಿಗೆಗಾಗಿ ನೈಸರ್ಗಿಕ ಮೂರು ಮೂಲ ಸಂಪನ್ಮೂಲಗಳಾದ ಗಾಳಿ, ನೀರು ಮತ್ತು ಮಣ್ಣು ರಕ್ಷಿಸುವ ತುರ್ತು ಅಗತ್ಯತೆ ಇದೆ. ಪರಿಸರ ಸಮತೋಲನ ಕಾಪಾಡಿಕೊಳ್ಳಲು ಜವಾಬ್ದಾರಿಯುತ ಬಳಕೆ ಮತ್ತು ಸಂಪನ್ಮೂಲ ನಿರ್ವಹಣೆಯೂ ಅಗತ್ಯ. ತಮ್ಮ ಸಮುದಾಯಗಳಲ್ಲಿ ಸಂರಕ್ಷಣಾ ಉಪಕ್ರಮಗಳಲ್ಲಿ ಸಕ್ರಿಯವಾಗಿ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ವರ್ಗೀಸ್​ ಪಿ. ಮಾತನಾಡಿ, ಪರಿಸರದಲ್ಲಿ ಹೆಚ್ಚಿನ ಹಸಿರು ಹೊದಿಕೆಯಿಂದಾಗಿ ಭವಿಷ್ಯದಲ್ಲಿ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಲು ಸಾಧ್ಯ. ಅಲ್ಲದೆ, ಹವಾಮಾನ ಬದಲಾವಣೆ ತಗ್ಗಿಸಲು ಈ ಕ್ರಮ ಗಮನಾರ್ಹ ಕೊಡುಗೆ ನೀಡುತ್ತದೆ ಎಂದರು.
ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟರು. 
ಡಾ. ವಿಶಾಲಾಕ್ಷಿ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಾಯ ಭಾಗವತ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಪ್ರೊ. ಜಯಶ್ರೀ ಎಂ.ಸಿ. ವಂದಿಸಿದರು.