ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಧರ್ಮಪಾಲ ಯು. ದೇವಾಡಿಗ ಮಾತನಾಡಿದರು. ಹಿರಿಯಡ್ಕ ಮೋಹನ್ ದಾಸ್, ಗಣೇಶ್ ದೇವಾಡಿಗ, ಯಾದವ್ ದೇವಾಡಿಗ, ರವಿ ಎಸ್. ದೇವಾಡಿಗ ಇದ್ದರು.
* ಮಹಾಮಂಡಳದ ಅಧ್ಯಕ್ಷ ಧರ್ಮಪಾಲ ಯು. ಮಾಹಿತಿ
* ಜು.5ರಂದು ಬಾರ್ಕೂರಿನಲ್ಲಿ ಕಾರ್ಯಾಲಯ ಉದ್ಘಾಟನೆ
ಉಡುಪಿ: ದೇವಾಡಿಗ ಸಮುದಾಯಕ್ಕೆ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಮಾನ್ಯತೆಗಾಗಿ ಉಡುಪಿ ಚಿಟ್ಪಾಡಿಯ ಬಯಲು ರಂಗಮಂದಿರದಲ್ಲಿ ಡಿ.20ರಂದು 'ವಿಶ್ವ ದೇವಾಡಿಗ ಮಹಾ ಅಧಿವೇಶನ' ಆಯೋಜಿಸಲಾಗಿದೆ. ಆ ಕಾರ್ಯಕ್ರಮ ಯಶಸ್ವಿಗೆ ಅನುಕೂಲವಾಗುವಂತೆ ಉಡುಪಿಯ ದೇವಾಡಿಗರ ಸೇವಾ ಸಂಘ (ರಿ.)ದಲ್ಲಿ ಜು.5ರಂದು ಬೆಳಗ್ಗೆ 10 ಗಂಟೆಗೆ ಅಧಿವೇಶನದ ಕಾರ್ಯಾಲಯ ಉದ್ಘಾಟನೆಗೊಳ್ಳಲಿದೆ ಎಂದು ವಿಶ್ವ ದೇವಾಡಿಗ ಮಹಾಮಂಡಳ ಬಾರ್ಕೂರು ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಮಾಹಿತಿ ನೀಡಿದರು.
ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ (ಜು.4) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವಾಡಿಗ ಜನಾಂಗವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಗೂ ಕೇರಳ ರಾಜ್ಯದ ಕಾಸರಗೋಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ ಎಂದರು.
ದೇಗುಲಗಳಲ್ಲಿ ಸೇವೆ
ದೇವಾಡಿಗರು ವೃತ್ತಿಯಲ್ಲಿ ಕೃಷಿ ಕಾರ್ಮಿಕರಾಗಿದ್ದು ದೇವಸ್ಥಾನ, ಧಾರ್ಮಿಕ ಕೇಂದ್ರದ ಬಳಿಯೇ ನೆಲೆಸಿರುತ್ತಾರೆ. ದೇಗುಲಗಳಲ್ಲಿ ವಾಲಗ, ಸಂಗೀತ ಸೇವೆ, ಶುಚಿತ್ವ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಅತಿ ಭಕ್ತಿಯಿಂದ ಸೇವೆ ಮಾಡುತ್ತಿರುವ ಜನಾಂಗವಾಗಿದೆ. ಜನಗಣತಿಯ ಆಧಾರದಲ್ಲಿ ಸುಮಾರು 5 ಲಕ್ಷ ಎಂದಿದ್ದರೂ ಸುಮಾರು 8 ಲಕ್ಷಕ್ಕೂ ಅಧಿಕ ಜನರಿದ್ದಾರೆ. ಸಾಮಾಜಿಕ ಹಾಗೂ ರಾಜಕೀಯವಾಗಿ ಬಹಳ ಶೋಷಿತರಾಗಿದ್ದು, ಜೀವನೋಪಾಯಕ್ಕಾಗಿ ದೇಶ-ವಿದೇಶಗಳಲ್ಲಿ ನೆಲೆಸಿದ್ದಾರೆ. ಮಹಾ ಅಧಿವೇಶನದ ದಿನದಂದು 25 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾ ಮಂಡಳದ ಪ್ರಧಾನ ಕಾರ್ಯದರ್ಶಿ ಗಣೇಶ್ ದೇವಾಡಿಗ, ಸಹ ಕಾರ್ಯದರ್ಶಿ ಯಾದವ್ ದೇವಾಡಿಗ, ಮುಂಬಯಿ ಸಂಘದ ಅಧ್ಯಕ್ಷ ರವಿ ಎಸ್. ದೇವಾಡಿಗ, ಕೋಶಾಧಿಕಾರಿ ಸುರೇಶ್ ಸೇರಿಗಾರ್, ಸಂಘಟನಾ ಕಾರ್ಯದರ್ಶಿ ಜನಾರ್ದನ್ ಪಡುಪಣಂಬೂರು, ಉಡುಪಿ ಸಂಘದ ಅಧ್ಯಕ್ಷ ಚೆನ್ನಪ್ಪ ಮೊಯಿಲಿ ಇದ್ದರು.
ಬಜೆಟ್ನಲ್ಲಿ ಕಾದಿಡಿ ಅನುದಾನ
ಮಹಾಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್ ಮಾತನಾಡಿ, ದೇಗುಲಗಳಲ್ಲಿ ಬ್ರಾಹ್ಮಣರ ನಂತರ ದೇವಾಡಿಗ ಜನಾಂಗದವರಿಗೆ 2ನೇ ಪ್ರಾತಿನಿಧ್ಯ ಇದೆ. ಹೀಗಾಗಿ ಆನುವಂಶಿಕ ಮೊಕ್ತೆಸರ ಅವಕಾಶವನ್ನು ದೇವಾಡಿಗ ಜನಾಂಗದವರಿಗೂ ನೀಡುವಂತಾಗಬೇಕು. ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ನಮ್ಮ ಸಮುದಾಯಕ್ಕೂ ಆದ್ಯತೆ ಲಭಿಸಬೇಕು. ಮಾಜಿ ಸಿಎಂ ವೀರಪ್ಪ ಮೊಯಿಲಿ ಹೊರತಾಗಿ ಸಮುದಾಯದ ಬೇರೆ ಯಾರಿಗೂ ಇದುವರೆಗೆ ಪ್ರಾಶಸ್ತ್ಯ ಲಭಿಸಿಲ್ಲ. ಎಲ್ಲ ಪಕ್ಷದಲ್ಲೂ ನಮ್ಮ ಸಮುದಾಯದವರಿದ್ದಾರೆ. ಜನಸಂಖ್ಯೆಯ ಕೊರತೆಯಿಂದಾಗಿ ರಾಜಕೀಯವಾಗಿ ಮನ್ನಣೆ ಲಭಿಸುತ್ತಿಲ್ಲ. ಸಮುದಾಯದ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಬೇಕು. ಒಂದಿಷ್ಟು ಅನುದಾನ ಕಾದಿಡಬೇಕು ಎಂದು ಮಹಾ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.