ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ರಕ್ತದಾನಿಗಳನ್ನು ಸನ್ಮಾನಿಸಲಾಯಿತು.
ಉಡುಪಿ: ಜಿಲ್ಲೆಯಲ್ಲಿ ಸಾವಿರಾರು ರಕ್ತದಾನಿಗಳಿದ್ದಾರೆ. ಅವರಿಂದಾಗಿ ವೈದ್ಯಕಿಯ ಕ್ಷೇತ್ರವು ಮಹತ್ವದ ಸ್ಥಾನ ಪಡೆದಿದೆ. ರಾಜ್ಯದಲ್ಲೇ ರಕ್ತದಾನಿಗಳ ಜಿಲ್ಲೆಯಾಗಿ ಗುರುತಿಸಲ್ಪಟ್ಟು ಮಾದರಿಯಾಗಿದೆ ಎಂದು ರಾಜ್ಯ ರೆಡ್ಕ್ರಾಸ್ ಸಂಸ್ಥೆ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ , ರಕ್ತನಿಧಿ ಕೇಂದ್ರ ಕುಂದಾಪುರ ಮತ್ತು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಆಶ್ರಯದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಮಾತಾನಾಡಿದರು.
ಕುಂದಾಪುರ ರೆಡ್ಕ್ರಾಸ್ ಸಭಾಪತಿ ಜಯಕರ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ತೀವ್ರ ಕೊರತೆಯಿದ್ದು, ರಕ್ತದಾನದ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರತ್ನ ಸುವರ್ಣ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರಕ್ತದಾನಿಗಳಾದ ಸುಕನ್ಯಾ ಎಂ. ಕಳಸ, ಅಕ್ಷತ್ ನಾಯಕ್, ವಿಶ್ವನಾಥ ನಾಯಕ್, ರಘುರಾಮ್, ಶಿವಕುಮಾರ್ ಶೆಟ್ಟಿಗಾರ್ ಮತ್ತು ರಮೇಶ್ ಕರ್ಕೇರ ಅವರನ್ನು ಸನ್ಮಾನಿಸಲಾಯಿತು. ಸುಕನ್ಯ ಎಂ. ಕಳಸ ಮತ್ತು ಶಿವಕುಮಾರ್ ಶೆಟ್ಟಿಗಾರ್ ಸನ್ಮಾನಿತರ ಪರವಾಗಿ ಮಾತನಾಡಿದರು. ಜಿಲ್ಲಾ ರೆಡ್ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ, ಆಡಳಿತ ಮಂಡಳಿ ಸದಸ್ಯ ಟಿ. ಚಂದ್ರಶೇಖರ್ ಉಪಸ್ಥಿತರಿದ್ದರು. ರೆಡ್ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿ, ರೆಡ್ಕ್ರಾಸ್ ಸದಸ್ಯ ಪ್ರ್ರೊ. ದಯಾನಂದ ಡಿ. ನಿರೂಪಿಸಿ, ರೆಡ್ಕ್ರಾಸ್ ಖಚಾಂಚಿ ರಮಾದೇವಿ ವಂದಿಸಿದರು.