ಮಣಿಪಾಲದ ತ್ರಿವರ್ಣ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ 'ವಿಶ್ವ ಕಲಾ ದಿನ' ಕಾರ್ಯಕ್ರಮವನ್ನು ಹರ್ಷವರ್ಧನ್ ಭಟ್ ಉದ್ಘಾಟಿಸಿದರು. ಮನೋಜ್ ಕಡಬ, ಗಣೇಶ್ ರಾಜ್ ಸರಳಬೆಟ್ಟು, ಹರೀಶ್ ಸಾಗಾ ಹಾಗೂ ವಿದ್ಯಾರ್ಥಿಗಳಿದ್ದರು.
* ಹರ್ಷವರ್ಧನ್ ಭಟ್ ಅನಿಸಿಕೆ
* ವಿಶ್ವಕಲಾ ದಿನಾಚರಣೆ ಉದ್ಘಾಟನೆ
* ಬಟ್ಟೆಯಲ್ಲಿ ಬುದ್ಧನ ಬೃಹತ್ ಕಲಾಕೃತಿ ರಚನೆ
ಉಡುಪಿ: ಇಂದಿನ ಯುವ ಪೀಳಿಗೆ ಮೊಬೈಲ್ನಲ್ಲೇ ಮುಳುಗಿಹೋಗುತ್ತಿದ್ದು ಅವರಲ್ಲಿನ ಪ್ರತಿಭೆಗೆ ಮಂಕು ಕವಿಯುತ್ತಿದೆ. ಅವರ ಭವಿಷ್ಯ ಉಜ್ವಲವಾಗಲು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಆ ನಿಟ್ಟಿನಲ್ಲಿ ಕಲಾ ಚಟುವಟಿಕೆಗಳು ಅತ್ಯಂತ ಮಹತ್ವದ್ದಾಗಿದ್ದು, ಇದು ಅವರಲ್ಲಿ ಸೃಜನಶೀಲ ಗುಣ ಬೆಳೆಸುತ್ತದೆ ಎಂದು ಬೆನಕ ಆರ್ಟ್ಸ್ ಮತ್ತು ಕ್ರಾಫ್ಟ್ನ ಮಾಲೀಕ ಹರ್ಷವರ್ಧನ್ ಭಟ್ ಅನಿಸಿಕೆ ವ್ಯಕ್ತಪಡಿಸಿದರು.
ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸಸ್ ಆ್ಯಂಡ್ ಗ್ಯಾಲರಿಯಲ್ಲಿ ಕಲಾ ವಿದ್ಯಾರ್ಥಿಗಳು ಲಿಯೋನಾರ್ಡೊ ಡಾ ವಿಂಚಿ ಅವರ ಜನ್ಮದಿನದ ಸ್ಮರಣಾರ್ಥ ಆಯೋಜಿಸಿದ್ದ 'ವಿಶ್ವ ಕಲಾ ದಿನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಟ್ಟೆಯಲ್ಲಿ ಅರಳಿದ ಬುದ್ಧನ ಕಲಾಕೃತಿ
ತ್ರಿವರ್ಣದ ವಿದ್ಯಾರ್ಥಿಗಳಾದ ಪ್ರಣತಿ ಬಿ. ಶೆಟ್ಟಿ,ಸುಪರ್ಣಾ ಸುವರ್ಣ, ಸ್ಮೃತಿ ಪಿ. ತುಂಗ ಅವರು ವಿವಿಧ ಬಣ್ಣದ ಬಟ್ಟೆಯ ಚೂರುಗಳನ್ನು ಬಳಸಿ ರಚಿಸಿದ್ದ ಭಗವಾನ್ ಗೌತಮ ಬುದ್ಧನ 50 ಚದರ್ ಅಡಿ ವಿಸ್ತೀರ್ಣದ ಕಲಾಕೃತಿಯನ್ನು ಕಲಾ ಗ್ಯಾಲರಿಯಲ್ಲಿ ಅನಾವರಣಗೊಳಿಸಲಾಯಿತು.
ಶೇಫಿನ್ಸ್ ಉಡುಪಿಯ ನಿರ್ದೇಶಕ ಮನೋಜ್ ಕಡಬ, ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಾ ಕೇಂದ್ರದ ಮಾರ್ಗದರ್ಶಕ, ಹಿರಿಯ ಕಲಾವಿದ ಹರೀಶ್ ಸಾಗಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿ ಕೆ. ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಬಟ್ಟೆಯಲ್ಲಿ ಸಿದ್ಧಪಡಿಸಿದ ಈ ಕಲಾಕೃತಿಯು ತಾಂತ್ರಿಕವಾಗಿ ಅತ್ಯಂತ ಜಟಿಲವಾಗಿದೆ. ಕಲಿಕೆಯಲ್ಲಿರುವ ವಿದ್ಯಾರ್ಥಿಗಳು ವೈವಿಧ್ಯಮಯ ಬಟ್ಟೆಗಳನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ಅವುಗಳನ್ನು ಬಹಳ ನಾಜೂಕಾಗಿ ಬಟ್ಟೆಯ ಮೇಲೆ ಅಂಟಿಸಿ ಬುದ್ಧನ ಮುಖದ ವಿವಿಧ ಭಾವನೆ ಮತ್ತು ಛಾಯೆಗಳನ್ನು ಅದ್ಭುತವಾಗಿ ಮೂಡಿಸಿದ್ದಾರೆ. ಕೇವಲ 48 ಗಂಟೆಗಳಲ್ಲಿ ಕಲಾಕೃತಿ ಪೂರ್ಣಗೊಳಿಸಿರುವುದು ವಿದ್ಯಾರ್ಥಿನಿಯರ ಏಕಾಗ್ರತೆ ಮತ್ತು ಕಲಾಪ್ರೇಮಕ್ಕೆ ಸಾಕ್ಷಿಯಾಗಿದೆ.