ಪ್ರೊ. ವೈದ್ಯ ರಬಿನಾರಾಯಣ ಆಚಾರ್ಯ ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ ಉದ್ಘಾಟಿಸಿದರು.
ಉಡುಪಿ: ಆಯುರ್ವೇದವು ಜಗತ್ತಿನ ಅತ್ಯಂತ ಹಳೆಯ ವೈದ್ಯಕಿಯ ಪದ್ಧತಿಯಾಗಿದ್ದು, ವೈದಿಕ ಕಾಲದಿಂದಲೂ ಅಸ್ತಿತ್ವದಲ್ಲಿದೆ. ವೇದಗಳಲ್ಲಿ ಉಲ್ಲೇಖಿಸಲಾದ ಔಷಧೀಯ ಸಸ್ಯಗಳ ಗುಣಗಳು ಇಂದಿಗೂ ಪ್ರಸ್ತುತವಾಗಿವೆ. ಹೀಗಾಗಿ ಸಹಸ್ರಾರು ವರ್ಷಗಳ ಹಿಂದೆಯೇ ಆಯುರ್ವೇದದ ವೈಜ್ಞಾನಿಕತೆ ಸಾಬೀತಾಗಿದೆ ಎಂದು ಆಯುಷ್ ಸಚಿವಾಲಯದ ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಪ್ರೊ. ವೈದ್ಯ ರಬಿನಾರಾಯಣ ಆಚಾರ್ಯ ಹೇಳಿದರು.
ಪುತ್ತಿಗೆ ನೃಸಿಂಹ ಸಭಾಭವನದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಕೇಂದ್ರೀಯ ಆಯುರ್ವೇದೀಯ ವಿಜ್ಞಾನ ಅನುಸಂಧಾನ ಪರಿಷತ್ ಸಹಯೋಗದಲ್ಲಿ ನಡೆದ ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದವು ಎಂದಿಗೂ ಹೊಸ ಆವಿಷ್ಕಾರಗಳನ್ನು ಅಥವಾ ರೋಗ ಪರಿಸ್ಥಿತಿಗಳನ್ನು ತಿರಸ್ಕರಿಸಿಲ್ಲ. ಚರಕ ಸಂಹಿತೆಯಲ್ಲಿ ಹೇಳಿರುವಂತೆ ಕಾಡಿನಲ್ಲಿ ಸಂಚರಿಸುವ ಗೋಪಾಲಕರಿಂದಲೂ ಔಷಧೀಯ ಸಸ್ಯಗಳ ಜ್ಞಾನವನ್ನು ಪಡೆದು ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಮೊಘಲರ ಆಡಳಿತಾವಧಿಯಲ್ಲಿ ಯುನಾನಿ ಪದ್ಧತಿಗೆ ಹೆಚ್ಚಿನ ಆದ್ಯತೆ ಸಿಕ್ಕಿತು. ಇದೇ ಅವಧಿಯಲ್ಲಿ ಸಾವಿರಾರು ಹಸ್ತಪ್ರತಿಗಳು ಬೆಂಕಿಗೆ ಆಹುತಿಯಾದವು. ಆಯುರ್ವೇದದ ಸಂಶೋಧನೆಗಳು ಕುಂಠಿತಗೊಂಡವು. ನಂತರ ಬಂದ ಬ್ರಿಟಿಷರು ಆಯುರ್ವೇದವನ್ನು ಅವೈಜ್ಞಾನಿಕ ಎಂದು ಬಿಂಬಿಸಲು ಯತ್ನಿಸಿದರು. ಸ್ವಾತಂತ್ರ್ಯಕ್ಕೆ ಮುನ್ನ ಮತ್ತು ನಂತರ ಸರ್ಕಾರಗಳು ಹಲವು ಸಮಿತಿಗಳನ್ನು ರಚಿಸಿದರೂ ಅವು ಕೇವಲ ಆಯುರ್ವೇದದ ವೈಜ್ಞಾನಿಕ ಸಿಂಧುತ್ವವನ್ನು ಪರೀಕ್ಷಿಸುವುದಕ್ಕಷ್ಟೇ ಸೀಮಿತವಾಗಿದ್ದವೇ ಹೊರತು, ಹೊಸ ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡಲಿಲ್ಲ. ಪ್ರಸ್ತುತ ಸರ್ಕಾರ ಇಂಡಿಯನ್ ನಾಲೆಜ್ ಸಿಸ್ಟಂ ಯೋಜನೆ ಮೂಲಕ ಭಾರತೀಯ ಪರಂಪರೆಗೆ ಹೊಸ ಚೈತನ್ಯ ನೀಡಿದೆ ಎಂದರು.
ಭಾರತವು ವೈವಿಧ್ಯಮಯ ಭಾಷೆಗಳ ನಾಡಾಗಿದ್ದು, ಪ್ರಾದೇಶಿಕ ಆಯುರ್ವೇದ ತಜ್ಞರು ಆಯಾ ಭಾಗದ ಭಾಷೆಗಳಲ್ಲೇ (ಕರ್ನಾಟಕ, ಕೇರಳ, ಒಡಿಶಾ, ಕಾಶ್ಮೀರ ಇತ್ಯಾದಿ) ಸ್ಥಳಿಯ ಸಸ್ಯಗಳ ಗುಣಗಳ ಬಗ್ಗೆ ಅಮೂಲ್ಯ ಮಾಹಿತಿಗಳನ್ನು ತಾಳೆಗರಿಗಳಲ್ಲಿ ದಾಖಲಿಸಿದ್ದಾರೆ. ಈ ವಿಭಿನ್ನ ಪ್ರಾದೇಶಿಕ ಜ್ಞಾನ ಸಂಪತ್ತು ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಕಳೆದ 4 ವರ್ಷಗಳಲ್ಲೇ ಆಯುರ್ವೇದಕ್ಕೆ ಸಂಬಂಧಿಸಿದ 3,000ಕ್ಕೂ ಅಧಿಕ ಹಸ್ತಪ್ರತಿಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ಡಿಜಿಟಲೀಕರಣಗೊಳಿಸಿ, ಅನುವಾದಿಸಿ, ಸಂಶೋಧನೆಗೆ ಒಳಪಡಿಸಲು ಪ್ರತ್ಯೇಕ ವೆಬ್ಸೈಟ್ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೈದ್ರಾಬಾದ್ ರಾಷ್ಟ್ರೀಯ ಭಾರತೀಯ ವೈದ್ಯಕಿಯ ಪರಂಪರೆ ಸಂಸ್ಥೆಯ ಸಹಾಯಕ ನಿರ್ದೇಶಕ ಡಾ.ಜಿ.ಪಿ ಪ್ರಸಾದ್, ನಿಟ್ಟೆ ವಿಶ್ವವಿದ್ಯಾಲಯ ಐಕೆಎಸ್ ನಿರ್ದೇಶಕ ಡಾ.ಸುಧೀರ್ ರಾಜ್ ಕೆ. ಮುಖ್ಯ ಅತಿಥಿಗಳಾಗಿದ್ದರು. ಪುತ್ತಿಗೆ ಮಠದ ಆಡಳಿತಾಧಿಕಾರಿ ನಾಗರಾಜ ಆಚಾರ್ಯ, ಕೇಂದ್ರೀಯ ಆಯುರ್ವೇದೀಯ ಅನುಸಂಧಾನ ಸಂಸ್ಥಾನ ಬೆಂಗಳೂರು ವಿಭಾಗದ ಸಹಾಯಕ ನಿರ್ದೇಶಕ ಡಾ.ಮಹೇಶ್ವರ ಟಿ., ರಾಜಸ್ಥಾನದ ಎಂ.ಎಸ್ ಪ್ರಾದೇಶಿಕ ಆಯುರ್ವೇದ ಸಂಶೋಧನಾ ಸಂಸ್ಥೆಯ ಸಂಶೋಧನಾ ಅಧಿಕಾರಿ ಡಾ. ವಿನೋದ್ ಕುಮಾರ್ ಲಾವಣಿಯಾ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಭಾಷಾ ವಿದ್ವಾಂಸ ಡಾ.ಕೀರ್ತಿಕಾಂತ್ ಶಮಾರ್, ಕೇಂದ್ರೀಯ ಸಂಸತ ವಿಶ್ವವಿದ್ಯಾಲಯದ ಡಾ .ಆರ್.ಎಲ್.ನಾರಾಯಣ ಸಿಂಹ, ಡಾ. ದಿಲೀಪ್ ಕುಮಾರ್ ಕಾರ್ ಮೊದಲಾದವರು ಉಪಸ್ಥಿತರಿದ್ದರು. ವಿದ್ವಾನ್ ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.