ಉಡುಪಿಯ ಡಾ. ಜಿ.ಶಂಕರ್ ಕಾಲೇಜ್ನಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಡಾ. ದಿವ್ಯಾರಾಣಿ ಪ್ರದೀಪ್ ಉದ್ಘಾಟಿಸಿದರು. ಪ್ರೊ.ನಿಕೇತನಾ, ವಸಂತಿ ಶೆಟ್ಟಿ ಬ್ರಹ್ಮಾವರ, ಪ್ರೊ. ಕೃಷ್ಣ ಭಟ್, ಶ್ರುತಿ, ರಶ್ಮಿ, ರೇಖಾ ಎಸ್.ಎನ್. ಇತರರಿದ್ದರು.
* ಡಾ. ದಿವ್ಯಾರಾಣಿ ಪ್ರದೀಪ್ ಆಶಯ
* ಪೋಶ್ ಕಾಯ್ದೆಯ ಕಾರ್ಯಾಗಾರ
ಉಡುಪಿ: ಸಮ್ಮತಿ ಇಲ್ಲದೆ ನಡೆಯುವ ಯಾವುದೇ ಲೈಂಗಿಕ ವರ್ತನೆ ಸಮರ್ಥಿಸಲಾಗದು. ಅನ್ಯರೊಂದಿಗೆ ಸ್ನೇಹ, ಏಕಾಂಗಿತನ, ಉಡುಪು, ವಾಹನದಲ್ಲಿ ಪ್ರಯಾಣಿಸಲು ಒಪ್ಪಿಗೆ ಅಥವಾ ಸೌಜನ್ಯದ ವರ್ತನೆ ಲೈಂಗಿಕತೆಗೆ ಅನುಮತಿ ನೀಡಿದಂತಲ್ಲ. ಸಾಮಾಜಿಕ ಜಾಲತಾಣಗಳ ಬಳಕೆಯ ವೈಯಕ್ತಿಕ ಆಯ್ಕೆಗಳೂ ಲೈಂಗಿಕ ಕಿರುಕುಳಕ್ಕೆ ಸಮ್ಮತಿಯಾಗದು. ಅನುಚಿತ ವರ್ತನೆಗೆ ಅದನ್ನು ಅನುಭವಿಸಿದವರನ್ನೇ ಹೊಣೆಯಾಗಿಸುವುದೂ ಸರಿಯಲ್ಲ ಎಂದು ಜಿಲ್ಲಾ ಪೋಶ್ ಸಮಿತಿ ಸದಸ್ಯೆ ಡಾ. ದಿವ್ಯಾರಾಣಿ ಪ್ರದೀಪ್ ಹೇಳಿದರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮಹಿಳಾ ಕುಂದು-ಕೊರತೆ ಪರಿಹಾರ ಸಮಿತಿ, ಯುವ ರೆಡ್ಕ್ರಾಸ್ ಘಟಕ, ಎನ್ಎಸ್ಎಸ್ ಹಾಗೂ ಐಕ್ಯೂಎಸಿ ವತಿಯಿಂದ ಶನಿವಾರ (ಸೆ.19) ಆಯೋಜಿಸಿದ್ದ ಲೈಂಗಿಕ ಕಿರುಕುಳ ತಡೆ (ಪಿಒಎಸ್ಎಚ್) ಕಾಯ್ದೆಯ ಕಾರ್ಯಾಗಾರದಲ್ಲಿ ಮಾತನಾಡಿದರು.
ಕನ್ನಡ ಲೇಖಕಿ ವಸಂತಿ ಶೆಟ್ಟಿ ಬ್ರಹ್ಮಾವರ ಮಾತನಾಡಿ, ಕಾಲ ಬದಲಾದಂತೆ ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳ ಸ್ವರೂಪವೂ ಬದಲಾಗಿದೆ. ಕೌಟುಂಬಿಕ ದೌರ್ಜನ್ಯ ಈ ಹಿಂದೆ ಪ್ರಮುಖ ಸಮಸ್ಯೆಯಾಗಿತ್ತು. ಇಂದು ಅತ್ಯಾಚಾರ, ಕೊಲೆ ಮತ್ತು ಲೈಂಗಿಕ ಕಿರುಕುಳಗಳು ಗಂಭೀರ ಸವಾಲಾಗಿದೆ. ಮನೆ, ಕೆಲಸದ ಸ್ಥಳ ಹಾಗೂ ಸಮಾಜದಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಸಂಯೋಜಕಿ, ಕಾಲೇಜ್ನ ಮಹಿಳಾ ಕುಂದು-ಕೊರತೆ ಪರಿಹಾರ ಸಮಿತಿಯ ಸಂಚಾಲಕಿ ಕವಿತಾ ಮಾತನಾಡಿ, ಲೈಂಗಿಕ ಕಿರುಕುಳ ತಡೆಗೆ ಎಲ್ಲ ಲಿಂಗಗಳಲ್ಲೂ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಕಾಲೇಜ್ನ ಪ್ರಾಂಶುಪಾಲೆ ಪ್ರೊ.ನಿಕೇತನಾ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಕೃಷ್ಣ ಭಟ್, ಉಡುಪಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಶ್ರುತಿ ಹಾಗೂ ರಶ್ಮಿ ಉಪಸ್ಥಿತರಿದ್ದರು.
ರಮ್ಯಾ ಕೆ. ಐತಾಳ್ ಪ್ರಾರ್ಥಿಸಿದರು. ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕಿ ರೇಖಾ ಎಸ್.ಎನ್. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ರಮ್ಯಾ ವಿ. ಹಾಗೂ ಡಾ. ಸಫಿಯಾ ಪರಿಚಯಿಸಿದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ರಾಕೇಶ್ ಕಾರ್ಯಕ್ರಮ ನಿರೂಪಿಸಿದರು. ಶರತ್ ಕುಮಾರ್ ವಂದಿಸಿದರು.
ಕಾರ್ಯಾಗಾರಕ್ಕೂ ಮೊದಲು ಮಹಿಳಾ ಕುಂದು-ಕೊರತೆ ಪರಿಹಾರ ಸಮಿತಿಯ ಸಭೆ ನಡೆಯಿತು. ಕಾಲೇಜ್ನಲ್ಲಿ ವಿದ್ಯಾರ್ಥಿನಿಯರು ಎದುರಿಸುತ್ತಿರುವ ವಿವಿಧ ಸಮಸ್ಯೆ, ಅವುಗಳ ಪರಿಹಾರಕ್ಕೆ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಲೈಂಗಿಕ ಕಿರುಕುಳದ ಕುರಿತು ಆಂತರಿಕ ಸಮಿತಿಗೆ ಲಿಖಿತ ದೂರು ಸಲ್ಲಿಸಬಹುದು. ವಿಚಾರಣೆ ವೇಳೆ ಎಲ್ಲರಿಗೂ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕು. ಕಾನೂನು ಹಾಗೂ ಸಂಸ್ಥೆಯ ನಿಯಮಗಳಿಗೆ ಅನುಗುಣವಾಗಿ ಪ್ರಕ್ರಿಯೆ ನಡೆಯಬೇಕು.