ಉಡುಪಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಯಂತ್​ ಕೋಟ್ಯಾನ್​ ಮಾತನಾಡಿದರು. ಕಿರಣಕುಮಾರ್​ ಬೈಲೂರು, ಶ್ರೀಕಾಂತ್​ ನಾಯಕ್​, ದಿನಕರ್​ ಶೆಟ್ಟಿ ಹೆರ್ಗ, ನಳಿನಿ ಪ್ರದೀಪ್​ ರಾವ್​ ಇದ್ದರು. 
ಉಡುಪಿ

ಎಸ್​ಐಆರ್​ ಅಭಿಯಾನ ಯಶಸ್ಸಿಗೆ ಸನ್ನದ್ಧರಾಗಿ

* ಮಂಗಳೂರು ವಿಭಾಗ ಸಹ ಪ್ರಭಾರಿ ಜಯಂತ್​ ಕೋಟ್ಯಾನ್​ ಕರೆ

* ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯ ತಂಡದ ಸಭೆ

ಉಡುಪಿ: ಇಪ್ಪತೆದು ವರ್ಷಕ್ಕೊಮ್ಮೆ ನಡೆಯುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಈ ಬಾರಿ ಜೂ.30ರಿಂದ ನಡೆಯಲಿದೆ. 2025ರ ಮತದಾರ ಪಟ್ಟಿಯಲ್ಲಿರುವ ಎಲ್ಲ ಮತದಾರರಿಗೆ ನೀಡುವ ನಿಗದಿತ ನಮೂನೆ ಪರಿಶೀಲಿಸಿ, ಅವರ ಸಹಿ, ಇತ್ತೀಚೆಗಿನ ಭಾವಚಿತ್ರ ಸಹಿತ ಅಗತ್ಯವಿರುವ ಸೂಕ್ತ ದಾಖಲೆಯೊಂದಿಗೆ ಕಡ್ಡಾಯವಾಗಿ ಬಿಎಲ್​ಒಗಳಿಗೆ ಸಲ್ಲಿಸಬೇಕಿದೆ. ಈ ಪ್ರಕ್ರಿಯೆಗಾಗಿ ಪಕ್ಷದಿಂದ ನೇಮಕಗೊಂಡಿರುವ ಬಿಎಲ್​ಒ-2ಗಳು ಸಕ್ರಿಯವಾಗಿ ಪಾಲ್ಗೊಂಡು ಎಸ್​ಐಆರ್​ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಮಂಗಳೂರು ವಿಭಾಗ ಸಹ ಪ್ರಭಾರಿ ಜಯಂತ್​ ಕೋಟ್ಯಾನ್​ ಕರೆ ನೀಡಿದರು.
ಉಡುಪಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಕಿರಣಕುಮಾರ್​ ಬೈಲೂರು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯ ತಂಡದ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ್​ ನಾಯಕ್​, ದಿನಕರ್​ ಶೆಟ್ಟಿ ಹೆರ್ಗ ಮಾತನಾಡಿ, ಜಿಲ್ಲೆಯಲ್ಲಿ ಕೈಗೊಂಡ ಹಾಗೂ ಕೈಗೊಳ್ಳಬೇಕಾಗಿರುವ ಪಕ್ಷದ ಕಾರ್ಯಚಟುವಟಿಕೆ ಹಾಗೂ ಪಕ್ಷದ ಸಾಧನೆ ಕುರಿತು ಮಾಹಿತಿ ನೀಡಿದರು. ಮಂಡಲಾಧ್ಯಕ್ಷರು ಮಂಡಲವಾರು ಚಟುವಟಿಕೆಗಳ ವರದಿ ಮಂಡಿಸಿದರು. ಇತ್ತೀಚೆಗೆ ನಡೆದಿದ್ದ ಜಿಲ್ಲಾ ಮಟ್ಟದ ಪಂಡಿತ್​ ದೀನದಯಾಳ್​ ಉಪಾಧ್ಯಾಯ ಪ್ರಶಿಕ್ಷಣ ವರ್ಗದ ಅವಲೋಕನ ಮಾಡಲಾಯಿತು.
ಸಭೆಯಲ್ಲಿ ಮಾಜಿ ಶಾಸಕ ಲಾಲಾಜಿ ಆರ್​. ಮೆಂಡನ್​, ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸಹಿತ ಪಕ್ಷದ ಪ್ರಮುಖರು, ಜಿಲ್ಲಾ ಪದಾಧಿಕಾರಿಗಳು, ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು, ವಿವಿಧ ಪ್ರಕೋಷ್ಠಗಳ ಸಂಚಾಲಕರು, ಸಹ ಸಂಚಾಲಕರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಗೀತೆ ಹಾಡಿದರು. ಜಿಲ್ಲಾ ಉಪಾಧ್ಯಕ್ಷೆ ನಳಿನಿ ಪ್ರದೀಪ್​ ರಾವ್​ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಅನಿತಾ ಶ್ರೀಧರ್​ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ವಿಜಯ ಕೊಡವೂರು ವಂದಿಸಿದರು.
"

ಅರ್ಹ ಮತದಾರರ ಹೆಸರು ಮತದಾರ ಪಟ್ಟಿಯಲ್ಲಿ ಬಿಟ್ಟು ಹೋಗದಂತೆ ಹಾಗೂ ಅನರ್ಹರ ಹೆಸರು ಸೇರ್ಪಡೆಗೊಳ್ಳದಂತೆ ಜಿಲ್ಲೆಯಾದ್ಯಂತ ಪಕ್ಷದ ಕಾರ್ಯಕರ್ತರು ಬೂತ್​ ಮಟ್ಟದಲ್ಲಿ ನಿಗಾ ವಹಿಸಬೇಕು. ಜತೆಗೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು.

— ಜಯಂತ್​ ಕೋಟ್ಯಾನ್​. ಬಿಜೆಪಿ ಮಂಗಳೂರು ವಿಭಾಗ ಸಹ ಪ್ರಭಾರಿ.