ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಸಚಿವ ಕೆ.ಎಸ್. ಬಸವಂತಪ್ಪ ಮಾತನಾಡಿದರು.
ಉಡುಪಿ: ಜಿಲ್ಲೆಯ ದೇವಸ್ಥಾನಗಳ ಜೀರ್ಣೊದ್ಧಾರಕ್ಕೆ ಅನುದಾನ ಒದಗಿಸಲಾಗುವುದು. ಮೀನುಗಾರರ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಲಾಗುವುದು. ಈ ಮೂಲಕ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಕ್ರಮ ವಹಿಸಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.
ನಗರದ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಸಮಿತಿ ವತಿಯಿಂದ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಒಂದು ಕುಟುಂಬ ಇದ್ದಂತೆ. ಪಕ್ಷದ ಪರವಾಗಿರುವ ಮೀನು ಕಾರ್ಮಿಕರು ಸಹಿತ ವಿವಿಧ ಕಾರ್ಮಿಕರನ್ನು ಒಗ್ಗೂಡಿಸಲು ಕ್ರಮ ವಹಿಸಲಾಗುವುದು. ಕಾಂಗ್ರೆಸ್ ಮೀನುಗಾರರ ಸಮಾವೇಶ ಏರ್ಪಡಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಯುವಜನರನ್ನು ಸಂಘಟಿಸಲು ಭಾರತ್ ಜೋಡೋ ಸಂಟನೆ ಬಹಳ ಸಹಕಾರಿಯಾಗಲಿದೆ ಎಂದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ , ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಪೂರ್ , ಮುಖಂಡರಾದ ರಾಜು ಪೂಜಾರಿ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ದಿನೇಶ್ ಪುತ್ರನ್, ಮಹಾಬಲ ಕುಂದರ್, ಹರಿಪ್ರಸಾದ್ ರೈ , ಪ್ರಖ್ಯಾತ ಶೆಟ್ಟಿ , ದಿನಕರ ಹೇರೂರು, ಮೀನಾಕ್ಷಿ ಮಾಧವ ಬನ್ನಂಜೆ , ನಿರೀಕ್ಷಾ ಮೆಂಡನ್ , ಗಣೇಶ್ ರಾಜ್ ಸರಳಬೆಟ್ಟು , ಸಂಧ್ಯಾ ತಿಲಕ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್ ಸಚಿವರನ್ನು ಗೌರವಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ವಂದಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.