ಉಳ್ಳಾಲ: ಕುತ್ತಾರ್ ಪದವಿನ ಸಲಾತ್‌ನಗರದಲ್ಲಿ ಶುಕ್ರವಾರ ಬಾವಿ ಕೊರೆಯುತ್ತಿದ್ದ ಸಂದರ್ಭ ಕ್ರೇನ್‌ನ ಕೊಕ್ಕೆಯಿಂದ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ಬೇರ್ಪಟ್ಟು ಬಾವಿಯೊಳಗಿದ್ದ ಕಾರ್ಮಿಕನ ತಲೆಮೇಲೆ ಬಿದ್ದು ಸಾವಿಗೀಡಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಮಲ್ಲಾಪುರ ನಿವಾಸಿ ಶಿವಕುಮಾರ ಜಿ.ಕೆ( 30) ಮೃತರು. ಕುತ್ತಾರ್ ಪದವು ಸಲಾತ್ ನಗರದಲ್ಲಿರುವ ಜಮೀನಿನಲ್ಲಿ ಹೊಸ ಬಾವಿ ಕೊರೆಯುವ ಕೆಲಸ ನಡೆಯುತ್ತಿತ್ತು. ಬಾವಿ 30 ಅಡಿ ಆಳದವರೆಗೆ ಕೊರೆಯಲಾಗಿದ್ದು, ಶುಕ್ರವಾರ ಮೂವರು ಕಾರ್ಮಿಕರು ಬಾವಿಯೊಳಗಿನಿಂದ ಮಣ್ಣು ತೆಗೆದು ಕಬ್ಬಿಣದ ಬಕೆಟ್‌ಗೆ ಹಾಕಿದ್ದು, ಕ್ರೇನ್ ಮೂಲಕ ಮಣ್ಣು ಮೇಲಕ್ಕೆ ಎಳೆಯುತ್ತಿದ್ದಾಗ ಕ್ರೇನ್‌ನ ಕೊಕ್ಕೆಯಿಂದ ಬಕೆಟ್ ಬೇರ್ಪಟ್ಟು ನೇರವಾಗಿ ಶಿವ ಕುಮಾರ್ ತಲೆಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಮೇಲಕ್ಕೆತ್ತಿ ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ.
ಬಾವಿಯೊಳಗಿದ್ದ ಇಬ್ಬರು ಕಾರ್ಮಿಕರು ಸಣ್ಣ ಪುಟ್ಟ ಗಾಯಗಳೊಂಡಿದ್ದಾರೆ. ಶಿವಕುಮಾರ್ ಪತ್ನಿ, ಪುತ್ರ, ಪುತ್ರಿಯೊಂದಿಗೆ ತೊಕ್ಕೊಟ್ಟಿನ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗುರುವಾರ ಪತ್ನಿ ಮತ್ತು ಮಕ್ಕಳನ್ನು ಊರಿಗೆ ಕಳುಹಿಸಿ ಶುಕ್ರವಾರ ಮತ್ತೆ ಕೆಲಸಕ್ಕೆ ಬಂದಿದ್ದರು.