ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ನವೀನ ಶೆಟ್ಟಿ ಕುತ್ಯಾರು ಮಾತನಾಡಿದರು. ಶ್ರೀಕಾಂತ ನಾಯಕ, ರೇಷ್ಮಾ ಉದಯ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ ಇದ್ದರು. 
ಉಡುಪಿ

ಬಿಜೆಪಿ ಗೆಲುವಿಗೆ ಬದ್ಧತೆಯಿಂದ ಶ್ರಮಿಸಿ

* ಉಡುಪಿ ಜಿಲ್ಲಾಧ್ಯಕ್ಷ ನವೀನ ಶೆಟ್ಟಿ ಕುತ್ಯಾರು ಕರೆ

* ಜಿಪಂ, ತಾಪಂ ಚುನಾವಣೆ ನಿಮಿತ್ತ ಸಭೆ

ಉಡುಪಿ: ಜಿಪಂ, ತಾಪಂ, ಮತ್ತು ಗ್ರಾಪಂ ಚುನಾವಣೆಗಳ ಮೀಸಲಾತಿ ಪ್ರಕಟಗೊಂಡಿದ್ದು, ಅಖಾಡ ಸಿದ್ಧಗೊಂಡಿದೆ. ಪಕ್ಷದ ಅಭ್ಯರ್ಥಿಗಳನ್ನು ಭರ್ಜರಿ ಬಹುಮತದಿಂದ ಗೆಲ್ಲಿಸುವ ಸವಾಲು ಸ್ವೀಕರಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಆ ನಿಟ್ಟಿನಲ್ಲಿ ಪಕ್ಷದ ಪ್ರಮುಖರು, ಎಲ್ಲ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಬದ್ಧತೆಯಿಂದ ಶ್ರಮಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ನವೀನ ಶೆಟ್ಟಿ ಕುತ್ಯಾರು ಕರೆ ನೀಡಿದರು.

ಉಡುಪಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ (ಅ.13) ಆಯೋಜಿಸಿದ್ದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಅ.26ರಂದು ಪ್ರತಿಭಟನೆ

ರಾಜ್ಯ ಕಾಂಗ್ರೆಸ್​ ಸರ್ಕಾರದ ಆಡಳಿತ ವೈಫಲ್ಯ, ಜನವಿರೋಧಿ ನೀತಿ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಅ.26ರಂದು ಜಿಲ್ಲಾ ಕೇಂದ್ರದಲ್ಲಿ 'ಅಹೋರಾತ್ರಿ ಬೃಹತ್​ ಪ್ರತಿಭಟನೆ' ನಡೆಯಲಿದೆ. ಈ ಹೋರಾಟದಲ್ಲಿ ಪಕ್ಷದ ಎಲ್ಲರೂ ಪಾಲ್ಗೊಂಡು ಸಂಘಟನೆಯ ಶಕ್ತಿ ತೋರ್ಪಡಿಸಬೇಕು. ಸೆ.17ರಿಂದ ನಡೆಯುತ್ತಿರುವ ಪಕ್ಷದ 'ಸೇವಾ ಸಂಕಲ್ಪ ಅಭಿಯಾನ'ದ ಸಮಾರೋಪ ಸಮಾರಂಭ ಅ.17ರಂದು ಕೋಟದ ಕಾರಂತ ಕಲಾ ಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯಕ ಪಕ್ಷದ ಸಂಘಟನಾತ್ಮಕ ವಿಚಾರ ಮತ್ತು ಚುನಾವಣಾ ಪೂರ್ವ ಸಿದ್ಧತೆಗಳ ಮಾಹಿತಿ ನೀಡಿದರು. ಮಂಡಲವಾರು ಕಾರ್ಯ ಚಟುವಟಿಕೆಗಳ ವರದಿ ಮಂಡಿಸಲಾಯಿತು.

ಜಿಲ್ಲಾ ಉಪಾಧ್ಯಕ್ಷೆ ನಳಿನಿ ಪ್ರದೀಪ ರಾವ್​ ಗೀತೆ ಹಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ 10 ದಿನಗಳಲ್ಲಿ ಜಿಪಂನ ಎಲ್ಲ 28 ಕ್ಷೇತ್ರ ಸಹಿತ ಪ್ರತಿ ಗ್ರಾಪಂ ವ್ಯಾಪ್ತಿಯ ಕಾರ್ಯಕರ್ತರ ಸಭೆ ಆಯೋಜಿಸಿ ಚುನಾವಣಾ ಪೂರ್ವ ಸಿದ್ಧತೆ ನಡೆಸಬೇಕು. ಸಂಘಟಿತ ಪರಿಶ್ರಮದಿಂದ ಗೆಲುವಿನ ರೂವಾರಿಗಳಾಗಿ ಪಕ್ಷಕ್ಕಾಗಿ ಸಾರ್ಥಕ ಸೇವೆ ಸಲ್ಲಿಸಬೇಕು.
ನವೀನ ಶೆಟ್ಟಿ ಕುತ್ಯಾರು. ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ.