ಉಡುಪಿ ಮಣಿಪಾಲದಲ್ಲಿ ಆಯೋಜಿಸಿದ್ದ ಕೆನರಾ ಬ್ಯಾಂಕ್​ನ ಸಂಸ್ಥಾಪಕರ ದಿನಾಚರಣೆಯಲ್ಲಿ ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕೋಟ ಶ್ರೀನಿವಾಸ ಪೂಜಾರಿ, ಅಶೋಕ ಪೈ, ಗುರ್ಮೆ ಸುರೇಶ ಶೆಟ್ಟಿ, ಡಾ.ಎಚ್​.ಎಚ್​.ಎಸ್​. ಬಲ್ಲಾಳ, ಲಕ್ಷ್ಮೀಬಾಯಿ, ಎಚ್​.ಕೆ. ಗಂಗಾಧರ, ಡಾ. ಉದಯ ಶೆಟ್ಟಿ ಇದ್ದರು. 
ಉಡುಪಿ

ಹಿಂದುಳಿದವರ ಆರ್ಥಿಕ ಪ್ರಗತಿಗೆ ಶ್ರಮ ವಹಿಸಿ

* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಲಹೆ

* ಕೆನರಾ ಬ್ಯಾಂಕ್​ ಸಂಸ್ಥಾಪಕರ 121ನೇ ದಿನಾಚರಣೆ

ಉಡುಪಿ: ಉದ್ಯಮಗಳಿಗೆ ಜೀವಶಕ್ತಿಯಾದ ಬ್ಯಾಂಕ್​ಗಳು ಸಮಾಜದಲ್ಲಿ ಇನ್ನೂ ಹಿಂದುಳಿದವರ ಬದುಕಿನ ಉನ್ನತಿ, ಆರ್ಥಿಕ ಪ್ರಗತಿಗೆ ನೆರವು ನೀಡಲು ಮುಂದಾಗಬೇಕು. ರಾಜ್ಯದ ಇನ್ನಿತರ ಜಿಲ್ಲೆಗಳಿಗೆ ಹೋಲಿಸಿದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕಿಂಗ್​ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ಸಾಧನೆಯಲ್ಲಿ ಕೆನರಾ ಬ್ಯಾಂಕ್​ ದೇಶದಲ್ಲಿ 4ನೇ ಸ್ಥಾನದಲ್ಲಿದೆ. ಇಲ್ಲಿನ ಹಿರಿಯರ ದೂರದೃಷ್ಟಿತ್ವದಿಂದ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿಯೂ ಈ ಅವಳಿ ಜಿಲ್ಲೆಗಳು ದೇಶದ ಗಮನ ಸೆಳೆಯುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಶ್ಲಾಘಿಸಿದರು.

ಉಡುಪಿ ಮಣಿಪಾಲದ ಗೋಲ್ಡನ್​ ಜುಬಿಲಿ ಹಾಲ್​ನಲ್ಲಿ ಗುರುವಾರ (ನ.19) ಆಯೋಜಿಸಿದ್ದ ಕೆನರಾ ಬ್ಯಾಂಕ್​ನ ಸಂಸ್ಥಾಪಕ (ಅಮ್ಮೆಂಬಳ ಸುಬ್ಬರಾಯ ಪೈ)ರ 121ನೇ ದಿನದ ಸಮಾರಂಭದಲ್ಲಿ ಮಾತನಾಡಿ, ರಾಜಕಾರಣದಲ್ಲಿ ವ್ಯಾಪಾರೀಕರಣ ಹೆಚ್ಚುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕಾರಣ ಸೇವೆಗಾಗಿಯೇ ಇದೆ ಎಂದು ತೋರಿಸಿದ ದೇಶದ ಏಕೈಕ ರಾಜಕಾರಣಿಯಾಗಿದ್ದಾರೆ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.

ದೇಶಕ್ಕೆ ಐದು ಬ್ಯಾಂಕ್​ಗಳ ಕೊಡುಗೆ

ಮಾಹೆ ವಿವಿ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅಲ್ಲದೆ, ಐದು ಬ್ಯಾಂಕ್​ಗಳನ್ನು ರಾಷ್ಟ್ರಕ್ಕೆ ನೀಡಿದ ಹೆಗ್ಗಳಿಕೆಯೂ ಇದೆ. ಇದಕ್ಕೆ ಗುಣಮಟ್ಟದ ಸೇವೆ ಕಾರಣ. ಪ್ರತಿಯೊಬ್ಬರಿಗೂ ಸಹ ಬ್ಯಾಂಕ್​ನ ಅಗತ್ಯತೆ ಇರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಶೇ. 100 ಸಾಕ್ಷರತೆ ಸಾಧಿಸಿದೆ. ಉತ್ತಮ ಆರೋಗ್ಯ ಸೌಲಭ್ಯದಿಂದಾಗಿ ತಾಯಿ-ಮಕ್ಕಳ ಸಾವಿನ ಪ್ರಮಾಣವೂ ಗಣನೀಯ ಇಳಿಕೆ ಕಂಡಿದೆ ಎಂದರು.

ಮಾದರಿ ಕೃಷಿಕ ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಮಾದರಿ ಕೃಷಿಕ ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆನರಾ ಬ್ಯಾಂಕ್​ ಮಣಿಪಾಲ ವೃತ್ತ ಕಚೇರಿಯ ಮಹಾಪ್ರಬಂಧಕ ಎಚ್​.ಕೆ. ಗಂಗಾಧರ ಅಧ್ಯಕ್ಷತೆ ವಹಿಸಿದ್ದರು.

ಜಿಪಂ ಮುಖ್ಯ ಯೋಜನಾಧಿಕಾರಿ ಡಾ. ಉದಯ ಶೆಟ್ಟಿ, ಡಾ. ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಪೈ, ಮಹಾಪ್ರಬಂಧಕ ಸುನೀಲಕುಮಾರ, ಎಚ್​.ಟಿ. ಭಾವಿಷ್ಕಾರ, ಉದ್ಯಮಿ ಸಾಧು ಸಾಲ್ಯಾನ್​, ಕಟಪಾಡಿ ಎಸ್​ವಿಎಸ್​ ಕಾಲೇಜ್​ನ ನಿವೃತ್ತ ಪ್ರಾಂಶುಪಾಲೆ ಲಕ್ಷ್ಮೀಬಾಯಿ ಉಪಸ್ಥಿತರಿದ್ದರು.

ಮೂರು ದಿನಗಳ 'ಕೆನರಾ ಉತ್ಸವ' ವಸ್ತು ಪ್ರದರ್ಶನ ಉದ್ಘಾಟಿಸಲಾಯಿತು. ನೀಲಾವರದ ಸುಮೇಧಾ ಪ್ರಜ್ಞಾ ವಿಕಾಸ ಕೇಂದ್ರ ವಿಶೇಷ ಮಕ್ಕಳ ಶಾಲೆಗೆ ವಾಹನ ನೀಡಲಾಯಿತು. ವಿವಿಧ ಸಂಸ್ಥೆ, ಶಾಲೆಗಳಿಗೆ ಆರ್ಥಿಕ ನೆರವು ನೀಡಲಾಯಿತು.

ದೀಪಾ ಹಾಗೂ ರುಚಿ ಪ್ರಾರ್ಥಿಸಿದರು. ಕೆನರಾ ಬ್ಯಾಂಕ್​ನ ಕ್ಷೇತ್ರೀಯ ಕಾರ್ಯಾಲಯದ ಡಿಜಿಎಂ ಎಂ.ಮಾಧವಿ ಸ್ವಾಗತಿಸಿದರು. ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.

ನನ್ನ ಜಮೀನಿನಲ್ಲಿ ಬೀಳುವ ಮಳೆ ನೀರು ಹೊರಹೋಗದಂತೆ ತಡೆದು ಇಂಗುವಂತೆ ಮಾಡಿದ್ದೇನೆ. ಭೂಮಿಯಿಂದ ತೆಗೆದ ನೀರನ್ನು ಮರಳಿ ಭೂಮಿಗೇ ಉಣಿಸಬೇಕು. ಮನುಷ್ಯನೊಂದಿಗೆ ಸಣ್ಣ ಇರುವೆಯಿಂದ ಹಿಡಿದು ಎಲ್ಲ ಪಶು-ಪಕ್ಷಿ , ಪ್ರಾಣಿಗಳೂ ಬದುಕಬೇಕು. ಕೃಷಿ ಉತ್ಪನ್ನ ನಷ್ಟದ ಕೆಲಸವಾದರೂ ಬದುಕಲು ಆ ಕಾಯಕ ಮಾಡಲೇಬೇಕು. ನೀರನ್ನು ಉಳಿಸಿ, ಹಿತ-ಮಿತವಾಗಿ ಬಳಸಿ.
ಅಮೈ ಮಹಾಲಿಂಗ ನಾಯ್ಕ. ಪದ್ಮಶ್ರೀ ಪುರಸ್ಕೃತ ಕೃಷಿಕ.
ಕೆನರಾ ಬ್ಯಾಂಕ್​ ಮಣಿಪಾಲ ವೃತ್ತ ಕಚೇರಿಯ ಕ್ರೀಡಾ ಸಂಕೀರ್ಣದಲ್ಲಿ ನೇತ್ರ-ದಂತ, ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಡಾ. ಕೃಷ್ಣಮೂರ್ತಿ ಉಪಾಧ್ಯಾಯ ಉದ್ಘಾಟಿಸಿದರು.

ನೇತ್ರ-ದಂತ, ಆರೋಗ್ಯ ಉಚಿತ ತಪಾಸಣೆ ಶಿಬಿರ

ಕೆನರಾ ಬ್ಯಾಂಕ್​ ಸಂಸ್ಥಾಪಕರ ದಿನದ ನಿಮಿತ್ತ ಮಣಿಪಾಲ ವೃತ್ತ ಕಚೇರಿಯ ಕ್ರೀಡಾ ಸಂಕೀರ್ಣದಲ್ಲಿ ನೇತ್ರ-ದಂತ, ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಭಾರತೀಯ ವೈದ್ಯಕೀಯ ಸಂಘದ ಉಡುಪಿ ಕರಾವಳಿ ಘಟಕದ ಅಧ್ಯಕ್ಷ ಡಾ. ಕೃಷ್ಣಮೂರ್ತಿ ಉಪಾಧ್ಯಾಯ ಉದ್ಘಾಟಿಸಿ ಮಾತನಾಡಿ, ಬದುಕಿನಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯವೇ ಬಹುದೊಡ್ಡ ಸಂಪತ್ತು ಎಂದರು. ಬ್ಯಾಂಕ್​ನ ಮಹಾಪ್ರಬಂಧಕ ಎಚ್​.ಕೆ. ಗಂಗಾಧರ ಮಾತನಾಡಿದರು. ಜಿಎಂ ಎಚ್​.ಟಿ. ಭವಿಷ್ಕಾರ, ಡಿಜಿಎಂಗಳಾದ ಅತುಲ್​ ಮಿಶ್ರಾ, ಎಂ.ಮಾಧವಿ, ಸುನಾಗ್​ ಆಸ್ಪತ್ರೆಯ ಡಾ.ನರೇಂದ್ರ, ಡಾ.ವೀಣಾ, ಮಣಿಪಾಲ ಕೆ ಎಂಎಸಿ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ದೀಪಿಕಾ ಉಪಸ್ಥಿತರಿದ್ದರು. ಎಂ.ಜಿ. ಕಿರಣ ಕಾರ್ಯಕ್ರಮ ನಿರ್ವಹಿಸಿದರು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಕುಂಜಿಬೆಟ್ಟಿನ ಸುನಾಗ್​ ಆಸ್ಪತ್ರೆ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್​ ಟ್ರಸ್ಟ್​ ಆಶ್ರಯದಲ್ಲಿ ತಪಾಸಣೆ ನಡೆಯಿತು.