ಮಹಿಳಾ ದಿನಾಚರಣೆಯನ್ನು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂಎ ಗಪೂರ್ ಉದ್ಘಾಟಿಸಿದರು  
ಉಡುಪಿ

ಸ್ವಾವಲಂಬಿ ಮಹಿಳೆಯರಿಂದ ದೇಶದ ಅಭಿವೃದ್ಧಿ : ಗಫೂರ್

ಗೋಪಾಲಕೃಷ್ಣ ಪಾದೂರ್
ಉಡುಪಿ: ಕುಟುಂಬದ ಜೊತೆ ಸಮಾಜವನ್ನು ಮುನ್ನಡೆಸುವ ಹೊಣೆಗಾರಿಕೆಯೂ ಮಹಿಳೆಯರ ಮೇಲಿದೆ. ಮಹಿಳೆಯರು ಸ್ವಾವಲಂಬಿಗಳಾದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಹಾಗೂ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಜಿಲ್ಲಾ ಹಾಗೂ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ, ಪರ್ಯಾಯ ಶಿರೂರು ಮಠ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ರಾಜಾಂಗಣದಲ್ಲಿ ನಡೆದ ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸಮಾಜದ ಆಸ್ತಿ. ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡಿದಾಗ ಇಡೀ ಕುಟುಂಬ ಏಳಿಗೆ ಕಾಣುತ್ತದೆ. ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಯಾವುದೇ ಕ್ಷೇತ್ರದಲ್ಲಿ ನಾಯಕತ್ವ ನೀಡಿದಾಗ ಮಹಿಳೆಯರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಜಿಲ್ಲಾ ಮಹಿಳಾ ಮಂಡಳಿಯ ಒಕ್ಕೂಟಕ್ಕೆ ಸ್ವಂತ ಕಟ್ಟಡದ ಅವಶ್ಯಕತೆ ಇದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನ ಸೆಳೆದು ಸ್ವಂತ ಕಟ್ಟಡದ ಕನಸನ್ನು ನನಸು ಮಾಡಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಸರ್ಕಾರದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಲು ಶೇ. 33 ಮೀಸಲಾತಿ ನೀಡುವ ಕಾಯ್ದೆ ತರಲಾಗಿದ್ದು, ರಾಷ್ಟ್ರೀಯ ಜನಗಣತಿ ನಡೆದ ಬಳಿಕ ಕಾನೂನಾಗಿ ಜಾರಿಯಾಗಲಿದೆ. ಮಹಿಳೆಯರಿಗೆ ಮೀಸಲಾತಿ ದೊರೆತಾಗ ಅವರ ಧ್ವನಿ ಪಂಚಾಯಿತಿಯಿಂದ ಸಂಸತ್ ಸದನದವರೆಗೆ ಪ್ರತಿಧ್ವನಿಸಲಿದೆ. ಇದಕ್ಕಾಗಿ ಮಹಿಳೆಯರು ಈಗಿನಿಂದಲೇ ತಯಾರಿ ನಡೆಸಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಮಹಿಳಾ ರಕ್ಷಣಾಧಿಕಾರಿ ನಾಗರತ್ನ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶೋಭಾ ಕಲ್ಕೂರ, ಹಿರಿಯರಾದ ಸರಳ ಕಾಂಚನ್, ಶ್ಯಾಮಲಾ ಸಿ.ಕೆ, ಮತ್ತಿತರರು ಉಪಸ್ಥಿತರಿದ್ದರು.
ಅತ್ಯುತ್ತಮ ಸೇವೆಗಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಹೆಣ್ಣು ಮಗಳನ್ನು ಉಳಿಸಿ, ಹೆಣ್ಣು ಮಗಳನ್ನು ಓದಿಸಿ ಎಂಬ ವಿಷಯದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅನುರಾಧಾ ಹಾದಿಮನಿ ಸ್ವಾಗತಿಸಿ, ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ವಸಂತಿ ರಾವ್ ಕೊರಡ್ಕಲ್ ವಂದಿಸಿ, ಸಂಗೀತಾ ನಿರೂಪಿಸಿದರು.